Spread the love

ಕಾರವಾರ: ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಮಂಗಳವಾರ ನಡೆದ ಗಣೇಶೋತ್ಸವ ಶಾಂತಿಪಾಲನಾ ಸಭೆಯಲ್ಲಿ ಜಿಲ್ಲಾಡಳಿತದ ಡಿಜೆ ಬ್ಯಾನ್ ನಿರ್ಧಾರದ ವಿರುದ್ಧ ಟೋಲ್ ನಾಕಾ ಗಣೇಶೋತ್ಸವ ಸಮಿತಿಯ ಆಯೋಜಕರಾದ ಆನಂದು ರಾಮಾ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಕರಾವಳಿ ಉತ್ಸವದಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಡಿಜೆ ತಂಡದವರು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಾರೆ. ಆದರೆ, ವರ್ಷಕ್ಕೊಮ್ಮೆ ಬರುವ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ 1 ದಿನದ ಮಟ್ಟಿಗೂ ಡಿಜೆಗೆ ಅನುಮತಿ ನೀಡದಿರುವುದು ಖಂಡನೀಯ ಎಂದರು.

ಡಿಜೆ ಬಳಕೆಯನ್ನು ಬ್ಯಾನ್ ಮಾಡುವ ಬದಲು ಡಿಜೆ ಉಪಕರಣಗಳನ್ನು ತಯಾರಿಸುವ ಕಂಪನಿಗಳನ್ನೇ ಸರ್ಕಾರ ಬ್ಯಾನ್ ಮಾಡುವುದು ಸೂಕ್ತ ಎಂದು ಆನಂದು ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಡಿಜೆ ವ್ಯವಸ್ಥೆಯನ್ನು ನಂಬಿಕೊಂಡಿರುವ ಮಾಲೀಕರು ಸುಮಾರು 25 ರಿಂದ 30 ಲಕ್ಷ ರೂಪಾಯಿಗಳ ಬೃಹತ್ ಬಂಡವಾಳ ಹೂಡಿರುತ್ತಾರೆ. ಇವರಲ್ಲಿ ಬಹುತೇಕರು ಬಡವರಾಗಿದ್ದು, ಇಂದಿನ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಡಿಜೆ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುವುದು ಅವರಿಗೆ ಅತ್ಯಂತ ಕಷ್ಟಕರವಾಗಿದೆ. 

ಮದುವೆ ಸಮಾರಂಭಗಳು ಹಾಗೂ ಸರ್ಕಾರವೇ ಆಯೋಜಿಸುವ ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳಿಗೆ ಡಿಜೆ ಬಳಸಲು ಮುಕ್ತ ಅವಕಾಶ ನೀಡಲಾಗುತ್ತದೆ. ತಡರಾತ್ರಿಯವರೆಗೂ ಡಿಜೆ ಹಾಕಿ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ, ಹಿಂದೂಗಳ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಾತ್ರ ಡಿಜೆ ಬಳಕೆಗೆ ನಿರ್ಬಂಧ ಹೇರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಜಿಲ್ಲಾಡಳಿತವನ್ನು ನೇರವಾಗಿ ಪ್ರಶ್ನಿಸಿದರು.

ಗಣೇಶೋತ್ಸವವು ಕೇವಲ ವರ್ಷಕ್ಕೆ 1 ಬಾರಿ ಬರುವ ಸಂಭ್ರಮದ ಆಚರಣೆಯಾಗಿದ್ದು, ಹಬ್ಬದ ಸಂಪೂರ್ಣ ಅವಧಿಯಲ್ಲ, ಕೇವಲ ವಿಸರ್ಜನೆಯ ಕೊನೆಯ 1 ದಿನ ಮಾತ್ರ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಅವರು ಸಭೆಯಲ್ಲಿ ಮನವಿ ಮಾಡಿದರು. 

ಇತರೇ ಉತ್ಸವ ಮತ್ತು ಮದುವೆ ಸಮಾರಂಭಗಳಿಗೆ ನೀಡುವಂತೆಯೇ ಗಣೇಶ ವಿಸರ್ಜನಾ ಮೆರವಣಿಗೆಗೂ ನಿಗದಿತ ಸಮಯದವರೆಗಾದರೂ ಡಿಜೆ ಬಳಕೆಗೆ ಷರತ್ತುಬದ್ಧ ಅವಕಾಶ ಕಲ್ಪಿಸಿಕೊಡಬೇಕು. ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಡಿಜೆ ನಿರ್ವಾಹಕರಿಗೆ ಮತ್ತು ಅವರ ಕುಟುಂಬಗಳಿಗೆ ಜಿಲ್ಲಾಡಳಿತ ಈ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆನಂದು ನಾಯ್ಕ ಒತ್ತಾಯಿಸಿದರು.

Leave a Reply

Your email address will not be published. Required fields are marked *