Spread the love

ಕಾರವಾರ: ​ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸೇರಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ, ವಿದ್ಯಾರ್ಥಿಗಳು, ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನೇತೃತ್ವದಲ್ಲಿ ಮಂಗಳವಾರ ರಾತ್ರಿ ದಿಢೀರ್ ಉಪವಾಸ ಧರಣಿ ಸತ್ಯಾಗ್ರಹ ನಡೆಸಿದರು.

ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ವಸತಿ ನಿಲಯದಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ವರ್ಷಗಳಿಂದ ಎಸ್‌ಎಫ್‌ಐ ಸಂಘಟನೆಯು ನಿರಂತರ ಹೋರಾಟ ನಡೆಸುತ್ತಿದ್ದರೂ, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಗುಣಮಟ್ಟದ ಆಹಾರ ಮತ್ತು ಮೂಲಸೌಕರ್ಯಗಳಿಗೆ ಆಗ್ರಹ

​ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ರುಚಿಯಾದ ಹಾಗೂ ಪೌಷ್ಟಿಕ ಊಟ ಮತ್ತು ಉಪಹಾರ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಇದರ ಜೊತೆಗೆ, ಹಾಸ್ಟೆಲ್‌ನಲ್ಲಿ ತಕ್ಷಣವೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು ಹಾಗೂ ಶೌಚಾಲಯಗಳನ್ನು ಸುಸಜ್ಜಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಸತಿ ನಿಲಯಕ್ಕೆ ಸ್ವಂತ ಹಾಗೂ ಸುಸಜ್ಜಿತ ಖಾಯಂ ಕಟ್ಟಡ ನಿರ್ಮಿಸಬೇಕು, ವಿದ್ಯಾರ್ಥಿಗಳ ವ್ಯಾಸಂಗದ ಹಿತದೃಷ್ಟಿಯಿಂದ ಕಂಪ್ಯೂಟರ್ ಲ್ಯಾಬ್ ಹಾಗೂ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಬೇಕು ಮತ್ತು ತುರ್ತು ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಅಗತ್ಯ ಔಷಧಿಗಳನ್ನೊಳಗೊಂಡ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಲಭ್ಯವಿರುವಂತೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

​ಬೇಡಿಕೆ ಈಡೇರದಿದ್ದರೆ ಡಿಸಿ ಕಚೇರಿ ಚಲೋ ಎಚ್ಚರಿಕೆ

​ಜಿಲ್ಲಾಡಳಿತವು ತಕ್ಷಣವೇ ಹಾಸ್ಟೆಲ್ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು. ಇಲ್ಲವಾದಲ್ಲಿ ಎಸ್‌ಎಫ್‌ಐ ಉತ್ತರ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ‘ಜಿಲ್ಲಾಧಿಕಾರಿಗಳ ಕಚೇರಿ ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಸ್‌ಎಫ್‌ಐ ತಾಲೂಕು ಸಂಚಾಲಕರಾದ ವೀರೇಶ ರಾಠೋಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಉಪವಾಸ ಹಿನ್ನಲೆ ಸ್ಥಳಕ್ಕೆ ದೌಡಾಯಿಸಿದ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ಉಪವಾಸ ಕೈಬಿಡುವಂತೆ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು.

Leave a Reply

Your email address will not be published. Required fields are marked *