Spread the love

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಪೊಲೀಸರು ಕೇವಲ 1 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ತಾಲೂಕಿನ ನೆಲವಂಕಿ ರಸ್ತೆ ಮಾರ್ಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಸ್ಥಳೀಯ ಪರಿಚಯಸ್ಥ ಕಳ್ಳರು ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಹರಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ಸರ ಕಸಿದುಕೊಂಡು ಕಳ್ಳರು ಓಡುತ್ತಿದ್ದಾಗ ಗಾಬರಿಗೊಂಡ ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಕೂಗಿಕೊಂಡಿದ್ದಾರೆ. ಮಹಿಳೆಯ ಚೀರಾಟ ಕೇಳಿ ಅಲ್ಲೇ ಹತ್ತಿರದಲ್ಲಿದ್ದ ಯುವಕನೊಬ್ಬ ತಕ್ಷಣವೇ ಸಹಾಯಕ್ಕೆ ಓಡಿಬಂದಿದ್ದಾನೆ. ಅಷ್ಟರಲ್ಲಾಗಲೇ ಕಳ್ಳರು ಬೈಕ್ ಏರಿ ಪರಾರಿಯಾಗಿದ್ದರೂ, ಆ ಯುವಕ ಕಳ್ಳರ ಚಹರೆಯನ್ನು ಮತ್ತು ಬೈಕ್ ಬಗ್ಗೆ ನಿಖರವಾಗಿ ಗಮನಿಸಿದ್ದನು. ಕೂಡಲೇ ಆತ ಮಂಕಿ ಪೊಲೀಸರಿಗೆ ಕಳ್ಳರ ಗುರುತಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರವಾನಿಸಿದ್ದಾನೆ. 

ಯುವಕ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆಗಿಳಿದ ಮಂಕಿ ಪೊಲೀಸರು, ಘಟನೆ ನಡೆದ ಕೇವಲ 1 ಗಂಟೆಯೊಳಗೆ ಹೊನ್ನಾವರದಲ್ಲಿ ಇಬ್ಬರೂ ಸರಗಳ್ಳರನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *