ಭಟ್ಕಳ: ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಓಸಿ-ಮಟಕಾ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಇಳಿದಿದೆ. ಭಟ್ಕಳ ಉಪವಿಭಾಗದ ಎಎಸ್ಪಿ ರಾನು ಗುಪ್ತ ಅವರ ನೇತೃತ್ವದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಮುರುಡೇಶ್ವರ, ಭಟ್ಕಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರಂತರ ದಾಳಿಗಳನ್ನು ನಡೆಸಿ ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ತಾಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 19 ರಂದು ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 2 ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ 18,200 ರೂಪಾಯಿ ಮೌಲ್ಯದ 650 ಎಂಎಲ್ ಸಾಮರ್ಥ್ಯದ 34 ಬಿಯರ್ ಬಾಟಲಿಗಳು, 500 ಎಂಎಲ್ನ 77 ಬಿಯರ್ ಟಿನ್ಗಳು, 180 ಎಂಎಲ್ನ 3 ವಿಸ್ಕಿ ಬಾಟಲಿಗಳು ಹಾಗೂ 90 ಎಂಎಲ್ನ 48 ವಿಸ್ಕಿ ಪೌಚ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ, ಎರಡನೇ ಪ್ರಕರಣದಲ್ಲಿ 14,145 ರೂಪಾಯಿ ಮೌಲ್ಯದ 650 ಎಂಎಲ್ನ 20 ಬಿಯರ್ ಬಾಟಲಿಗಳು, 500 ಎಂಎಲ್ನ 15 ಬಿಯರ್ ಟಿನ್ಗಳು, 90 ಎಂಎಲ್ನ 124 ಮದ್ಯದ ಟೆಟ್ರಾ ಪ್ಯಾಕ್ಗಳು ಹಾಗೂ 180 ಎಂಎಲ್ನ 22 ಟೆಟ್ರಾ ಪ್ಯಾಕ್ಗಳನ್ನು ಜಪ್ತಿ ಮಾಡಲಾಗಿದೆ.
ಇದಲ್ಲದೆ, ಸೆಪ್ಟೆಂಬರ್ 21 ರಂದು ಭಟ್ಕಳ ನಗರ ಮತ್ತು ಗ್ರಾಮೀಣ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 5 ಓಸಿ-ಮಟಕಾ ಪ್ರಕರಣಗಳು ಹಾಗೂ 1 ಅಕ್ರಮ ಮದ್ಯ ಮಾರಾಟ ಪ್ರಕರಣವನ್ನು ದಾಖಲಿಸಿ, ವಿವಿಧ ಬ್ರ್ಯಾಂಡ್ಗಳ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಓಸಿ-ಮಟಕಾ ಸೇರಿದಂತೆ ಯಾವುದೇ ರೀತಿಯ ಜೂಜಾಟದ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಎಎಸ್ಪಿ ರಾನು ಗುಪ್ತ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಇಂತಹ ಅಕ್ರಮ ಚಟುವಟಿಕೆಗಳ ಕುರಿತು ಖಚಿತ ಮಾಹಿತಿ ನೀಡುವವರ ಹೆಸರು ಮತ್ತು ಇತರ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿರುವ ಪೊಲೀಸರು, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದ್ದಾರೆ..
