Spread the love

ಮಹಿಳಾ ಮೀಸಲಾತಿ ಮಸೂದೆಗೆ ಸೋಲು, ಪ್ರತಿಪಕ್ಷಗಳ ಮಹಿಳಾ ವಿರೋಧಿ ನಿಲುವಿನ ವಿರುದ್ಧ ಮಾಜಿ ಶಾಸಕಿ ಕಿಡಿ

ಕಾರವಾರ: ಬಹುಕಾಲದಿಂದ ಮಹಿಳೆಯರು ನಿರೀಕ್ಷಿಸುತ್ತಿದ್ದ ಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಮತದಾನ ಮಾಡುವ ಮೂಲಕ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಮಸೂದೆ ಸೋಲುವಂತೆ ಮಾಡುವ ಮೂಲಕ ಮಹಿಳಾ ವಿರೋಧಿ ನಿಲುವು ಪ್ರದರ್ಶಿಸಿದ್ದು, ಮುಂದಿನ ದಿನಗಳಲ್ಲಿ ಮಸೂದೆಯ ಪರವಾಗಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸಂಸತ್ತಿನಲ್ಲಿ ವಿಪಕ್ಷಗಳ ನಡೆಯ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷ ಇದುವರೆಗೂ ಮಹಿಳಾ ಮೀಸಲಾತಿ ಮಸೂದೆ ತರಲು ಯಶಸ್ವಿಯಾಗಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ತರುವ ಐತಿಹಾಸಿಕ ಮಸೂದೆ ತರಲು ಉದ್ದೇಶಿಸಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಸಂಸತ್ತಿನಲ್ಲಿ ಮಂಡಿಸಿದರೂ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಮೂಲಕ ಮಹಿಳಾ ವಿರೋಧಿ ನಿಲುವು ಪ್ರದರ್ಶಿಸಿದ್ದಾರೆ. ಮಹಿಳೆಯರ ಬಗ್ಗೆ ಪ್ರತಿಪಕ್ಷಗಳ ಕಾಳಜಿ ಎಷ್ಟಿದೆ ಎನ್ನುವುದು ಜಗಜ್ಜಾಹೀರಾಗಿದೆ. ಮಹಿಳಾ ವಿರೋಧಿ ನಿಲುವು ತಾಳಿದ ಪ್ರತಿಪಕ್ಷಗಳಿಗೆ ಬರಲಿರುವ ಎಲ್ಲ ಚುನಾವಣೆಗಳಲ್ಲೂ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ.

ಬೇರೆ ಸಂದರ್ಭಗಳಲ್ಲಿ ಮಹಿಳೆಯರ ಪರವಾಗಿ ಇದ್ದಂತೆ ನಟಿಸುವ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಿಜವಾದ ಬಣ್ಣ ಈಗ ಬಯಲಾಗಿದೆ. ಕಾಂಗ್ರೆಸ್ ನ ಮಹಿಳಾ ವಿರೋಧಿ ನಿಲುವಿಗೆ ಅದೇ ಕಾಂಗ್ರೆಸ್ ಪಕ್ಷದಲ್ಲಿರುವ ಮಹಿಳೆಯರೂ ಕೈಕಟ್ಟಿಕೊಂಡು ಇರುವಂತಹ ಪರಿಸ್ಥಿತಿ ಉಂಟಾಗಿದೆ. ನಾರಿಶಕ್ತಿ ವಂದನ್ ವಿಧೇಯಕದ ವಿರುದ್ಧ ನಿಂತು ಮಹಿಳಾ ವಿರೋಧಿಯಾದ ಕಾಂಗ್ರೆಸ್ ಗೆ ಜನತೆ ಮುಂಬರುವ ದಿನಗಳಲ್ಲಿ ಸೂಕ್ತ ಉತ್ತರ ಹೇಳಲಿದ್ದಾರೆ.

ಎಲ್ಲ ಪಕ್ಷಗಳೂ ಈ ಮಸೂದೆ ಮಂಡನೆಗೆ ಕೈಜೋಡಿಸುವ ಮೂಲಕ ಮಹಿಳೆಯರಿಗೆ ನ್ಯಾಯ, ಪ್ರಾತಿನಿಧ್ಯ ಒದಗಿಸಲು ಮುಂದಾಗಬೇಕಿತ್ತು. ಆದರೆ ಕೇವಲ ರಾಜಕೀಯಕ್ಕಾಗಿ ಈ ಮಸೂದೆಯ ವಿರುದ್ಧ ನಿಲುವು ತಳೆದು ಮಹಿಳಾ ಮೀಸಲಾತಿ ಸೋಲುವಂತೆ ಪ್ರತಿಪಕ್ಷಗಳು ನೋಡಿಕೊಂಡಿವೆ. ಇದು ಭಾರತೀಯ ಜನತಾ ಪಕ್ಷಕ್ಕೆ ಆದ ಸೋಲಲ್ಲ. ಇಡಿ ದೇಶದ ಸಮಸ್ತ ಮಹಿಳೆಯರಿಗೆ ಪ್ರತಿಪಕ್ಷಗಳು ಮಾಡಿದ ಅನ್ಯಾಯ, ದ್ರೋಹವಾಗಿದೆ. ಮಹಿಳೆಯರು ಮುಂದೆ ಬರುವುದನ್ನು ಸಹಿಸಲಾರದೆ ಈ ನಡೆ ಕೈಗೊಂಡಿವೆ. ಈ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗಾಗಿ ನಾವು ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ರೂಪಾಲಿ ಎಸ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *