ಕಾರವಾರ: ಕರ್ನಾಟಕ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧಿಸೂಚನೆಯಂತೆ, 2027ರಲ್ಲಿ ಒಟ್ಟು 18 ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ. ಇದರೊಂದಿಗೆ ಎಲ್ಲಾ ಭಾನುವಾರಗಳು ಹಾಗೂ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸರ್ಕಾರಿ ಕಚೇರಿಗಳಿಗೆ ರಜೆ ಇರಲಿವೆ.
ಈ ವರ್ಷದ ರಜಾ ಪಟ್ಟಿಯಲ್ಲಿ ಹಲವು ಪ್ರಮುಖ ಹಬ್ಬಗಳು ವಾರಾಂತ್ಯದ ದಿನಗಳಂದು ಬಂದಿರುವುದರಿಂದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಮಹಾವೀರ ಜಯಂತಿ ಏಪ್ರಿಲ್ 18ರಂದು, ಬಸವೇಶ್ವರ ಜಯಂತಿ ಮೇ 9ರಂದು, ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್-ಮಿಲಾದ್ ಆಗಸ್ಟ್ 15ರಂದು ಮತ್ತು ವಿಜಯದಶಮಿ ಅಕ್ಟೋಬರ್ 10ರಂದು ಭಾನುವಾರದಂದು ಬಂದಿವೆ.
ಮಹಾನವಮಿ ಹಾಗೂ ಆಯುಧಪೂಜೆ ಅಕ್ಟೋಬರ್ 9ರಂದು ಎರಡನೇ ಶನಿವಾರದಂದು ಮತ್ತು ಕ್ರಿಸ್‌ಮಸ್ ಡಿಸೆಂಬರ್ 25ರಂದು ನಾಲ್ಕನೇ ಶನಿವಾರದಂದು ಬಂದಿರುವುದರಿಂದ ಈ ದಿನಗಳನ್ನು ಪ್ರತ್ಯೇಕ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಸೇರಿಸಿಲ್ಲ.
2027ರ ಸಾರ್ವತ್ರಿಕ ರಜೆಗಳ ಪಟ್ಟಿ
| ಕ್ರ.ಸಂ. | ದಿನಾಂಕ | ಹಬ್ಬ / ರಜಾ ದಿನ |
| 1 | ಜನವರಿ 15 | ಮಕರ ಸಂಕ್ರಾಂತಿ |
| 2 | ಜನವರಿ 26 | ಗಣರಾಜ್ಯೋತ್ಸವ |
| 3 | ಮಾರ್ಚ್ 06 | ಮಹಾ ಶಿವರಾತ್ರಿ |
| 4 | ಮಾರ್ಚ್ 10 | ಖುತ್ಬು-ಎ-ರಂಜಾನ್ |
| 5 | ಮಾರ್ಚ್ 26 | ಗುಡ್ ಫ್ರೈಡೇ |
| 6 | ಏಪ್ರಿಲ್ 07 | ಚಾಂದ್ರಮಾನ ಯುಗಾದಿ |
| 7 | ಏಪ್ರಿಲ್ 14 | ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ |
| 8 | ಮೇ 01 | ಕಾರ್ಮಿಕ ದಿನಾಚರಣೆ |
| 9 | ಮೇ 17 | ಬಕ್ರೀದ್ |
| 10 | ಜೂನ್ 16 | ಮೊಹರಂ ಕಡೆ ದಿನ |
| 11 | ಸೆಪ್ಟೆಂಬರ್ 04 | ವರಸಿದ್ಧಿ ವಿನಾಯಕ ವ್ರತ |
| 12 | ಸೆಪ್ಟೆಂಬರ್ 29 | ಮಹಾಲಯ ಅಮಾವಾಸ್ಯೆ |
| 13 | ಅಕ್ಟೋಬರ್ 02 | ಗಾಂಧಿ ಜಯಂತಿ |
| 14 | ಅಕ್ಟೋಬರ್ 15 | ವಾಲ್ಮೀಕಿ ಜಯಂತಿ |
| 15 | ಅಕ್ಟೋಬರ್ 28 | ನರಕ ಚತುರ್ದಶಿ |
| 16 | ಅಕ್ಟೋಬರ್ 30 | ದೀಪಾವಳಿ |
| 17 | ನವೆಂಬರ್ 01 | ಕನ್ನಡ ರಾಜ್ಯೋತ್ಸವ |
| 18 | ನವೆಂಬರ್ 16 | ಕನಕದಾಸ ಜಯಂತಿ |
ಬ್ಯಾಂಕುಗಳಿಗೆ ಪ್ರತ್ಯೇಕ ರಜೆ, ಕೊಡಗಿಗೆ ಸ್ಥಳೀಯ ರಜೆ
ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಹಿನ್ನೆಲೆಯಲ್ಲಿ 2027ರ ಏಪ್ರಿಲ್ 1ರಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ಪ್ರತ್ಯೇಕ ರಜೆ ಇರಲಿದೆ.
ಕೊಡಗು ಜಿಲ್ಲೆಗೆ ಸ್ಥಳೀಯವಾಗಿ ಅನ್ವಯವಾಗುವಂತೆ ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 18ರಂದು ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 13ರಂದು ಹುತ್ತರಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಇದಲ್ಲದೆ, ರಾಜ್ಯ ಸರ್ಕಾರಿ ನೌಕರರಿಗಾಗಿ 19 ಪರಿಮಿತ ರಜೆಗಳನ್ನು ಗುರುತಿಸಲಾಗಿದೆ. ನೌಕರರು ಮುಂಚಿತವಾಗಿ ಅನುಮತಿ ಪಡೆದು ಗರಿಷ್ಠ ಎರಡು ಪರಿಮಿತ ರಜೆಗಳನ್ನು ಪಡೆಯಲು ಅವಕಾಶವಿದೆ. ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯ ದಿನವೇ ಸೌರ ಯುಗಾದಿ ಬಂದಿರುವುದರಿಂದ ಅದನ್ನು ಪ್ರತ್ಯೇಕವಾಗಿ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
