Spread the love

ಜೋಯಿಡಾ: ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕನೊಬ್ಬ ಗಾಯಗೊಂಡಿರುವ ಘಟನೆ ದಾಂಡೇಲಿ-ಜಗಲಬೇಟ್ ಮಾರ್ಗದ ಬೋರಿ ಕ್ರಾಸ್ ಬಳಿ ನಡೆದಿದೆ.

ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ದಾಂಡೇಲಿಯ ವಾಟರ್ ಟ್ಯಾಂಕ್ ನಿವಾಸಿ ಹಾಗೂ ಚಾಲಕ ಅಫ್ಜಲ್ ಅನ್ವರಸಾಬ ಮಾಸನಕಟ್ಟಿ (30) ಎಂಬುವವರು, ಶೌಕತ್ ಅಲಿ ಅಲ್ಲಾಭಕ್ಷ ದುಕಾನದಾರ ಅವರ ಮಾಲೀಕತ್ವದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ (KA-12/A-8344) ನಾಲ್ವರು ಪ್ರಯಾಣಿಕರಾದ ರಾಜಬಾ ಬಸವರಾಜ ಅಂಬೋಜಿ, ಮಹದೇವ ಅಮೃತಪ್ಪಾ ತೋಟದ, ಆನಂದ ಬಾಳಪ್ಪಾ ಸನದಿ ಹಾಗೂ ಹೀನಾ ರಿಯಾಜ್ ಶೇಖ್ ಅವರನ್ನು ಕರೆದುಕೊಂಡು ಬಾಡಿಗೆ ನಿಮಿತ್ತ ದಾಂಡೇಲಿಯಿಂದ ಜಗಲಬೇಟ್ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದರು.

ಕಾರು ಬೋರಿ ಕ್ರಾಸ್ ಸಮೀಪದ ತಿರುವಿನ ರಸ್ತೆಯಲ್ಲಿ ಸಾಗುತ್ತಿದ್ದಾಗ, ಎದುರುಗಡೆಯಿಂದ ಬಂದ ಲಾರಿ (GA-04/T-8086) ಚಾಲಕ, ಬೆಳಗಾವಿಯ ಕಂಗ್ರಾಳಿ ಕೆ.ಹೆಚ್. ನಿವಾಸಿ ಸಾಗರ ಕೃಷ್ಣಾ ಹೆರೇಕರ (37) ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ. ತಿರುವಿನಲ್ಲಿ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡ ಆತ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಪ್ರಯಾಣಿಕನಿಗೆ ಗಾಯ, ಕಾರು ಜಖಂ: 

ಡಿಕ್ಕಿಯ ರಭಸಕ್ಕೆ ಕಾರಿನ ಬಲಭಾಗದ ಬಾಗಿಲುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಾಜಬಾ ಬಸವರಾಜ ಅಂಬೋಜಿ ಅವರ ಮುಖದ ಭಾಗಕ್ಕೆ ರಕ್ತಗಾಯವಾಗಿದ್ದು, ಅವರನ್ನು ತಕ್ಷಣವೇ ರಾಮನಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಕಾರು ಚಾಲಕ ಅಫ್ಜಲ್ ಅನ್ವರಸಾಬ ಮಾಸನಕಟ್ಟಿ ನೀಡಿದ ದೂರಿನ ಮೇರೆಗೆ ರಾಮನಗರ ಪೊಲೀಸ್ ಠಾಣೆಯಲ್ಲಿ (ಗುನ್ನಾ ನಂ. 125/2026) ಭಾರತೀಯ ನ್ಯಾಯ ಸಂಹಿತೆ-2023ರ (BNS) ಕಲಂ 281 ಮತ್ತು 125(ಎ) ಅಡಿಯಲ್ಲಿ ಲಾರಿ ಚಾಲಕ ಸಾಗರ ಕೃಷ್ಣಾ ಹೆರೇಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *