ಕಾರವಾರ: ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುನಗಿವಾಡಾ ಕ್ರಾಸ್ (ರಾಜ್ಯ ಹೆದ್ದಾರಿ) ಬಳಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿಕೊಂಡು ಬಂದು ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಮಲ್ಲಾಪುರ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಪಘಾತವೆಸಗಿದ ಬೆಳೂರು ದೇವಳಮಕ್ಕಿ ನಿವಾಸಿ ದರ್ಶನ ಗೋಪಾಲ ಗಾಂವಕರ್ (ಬೈಕ್ ನಂ: KA-30/U-6474) ವಿರುದ್ಧ ದೂರು ದಾಖಲಾಗಿದೆ.
ಘಟನೆಯ ಹಿನ್ನೆಲೆ: ಪಾಗಿವಾಡಾದ ನೈತಿಸಾವರ ನಿವಾಸಿ ಅಮಿತ್ ಕೃಷ್ಣಾನಂದ ಪಾಗಿ ಅವರು ಅಕ್ಟೋಬರ್ 23 ರಂದು ತಮ್ಮ ಸ್ನೇಹಿತ ರವಿಕಾಂತ್ ಪಾಗಿ ಅವರೊಂದಿಗೆ ಬೈಕ್ನಲ್ಲಿ (KA-30/S-3025) ಖಾರ್ಗಾದ ಅಂಗಡಿಗೆ ತೆರಳುತ್ತಿದ್ದರು. ಗುನಗಿವಾಡಾ ಕ್ರಾಸ್ ಬಳಿ ನಿಧಾನವಾಗಿ ಬಲಕ್ಕೆ ತಿರುಗುವಾಗ ಕಾರವಾರ ಕಡೆಯಿಂದ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ದರ್ಶನ, ಅಮಿತ್ ಅವರ ಬೈಕ್ಗೆ ಭೀಕರವಾಗಿ ಡಿಕ್ಕಿ ಹೊಡೆಸಿದ್ದಾನೆ.
ಪರಿಣಾಮ ಅಮಿತ್ ರಸ್ತೆಗೆ ಬಿದ್ದು ಅವರ ಕಣ್ಣು ಹಾಗೂ ತಲೆಗೆ ಪೆಟ್ಟಾಗಿದೆ. ಹಿಂಬದಿ ಸವಾರ ರವಿಕಾಂತ್ ಅವರಿಗೂ ಗಾಯಗಳಾಗಿವೆ. ಅಲ್ಲದೆ ಅಪಘಾತವೆಸಗಿದ ದರ್ಶನನಿಗೂ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಅಮಿತ್ ಅವರ ಸಹೋದರಿ, ಮಲ್ಲಾಪುರದ ಹಿಂದೂವಾಡಾದಲ್ಲಿ ವಾಸವಿರುವ ಸುಷ್ಮಾ ಕೃಷ್ಣಾನಂದ ಪಾಗಿ (40) ನೀಡಿದ ಲಿಖಿತ ದೂರಿನ ಮೇರೆಗೆ, ಮಲ್ಲಾಪುರ ಠಾಣೆ ಪೊಲೀಸರು ಬಿಎನ್ಎಸ್ (BNS) ಕಲಂ 281, 125(ಎ) ಅಡಿಯಲ್ಲಿ ಪ್ರಕರಣ (ಗುನ್ನಾ ನಂ. 20/2026) ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
