ಗೋಕರ್ಣ: ಇಲ್ಲಿನ ಪ್ರಸಿದ್ಧ ಮುಖ್ಯ ಕಡಲತೀರದಲ್ಲಿ (Main Beach) ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವ ರಕ್ಷಕ (Lifeguards) ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಮದ್ ಅಪ್ಸನ್ ಅಲಿ (21), ಆಶ್ರಫ್ ಮೆಹಬೂಬ ಅಲಿ (22) ಹಾಗೂ ಚಿಕ್ಕಬಳ್ಳಾಪುರ ಮೂಲದ ಶ್ರೀನಿವಾಸ ವೆಂಕಟಸ್ವಾಮಿ (35) ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು.
ಬುಧವಾರ ಸಂಜೆ 4:30ರ ಸುಮಾರಿಗೆ ಈ ಮೂವರು ಸೇರಿದಂತೆ ಒಟ್ಟು 6 ಜನ ಗೆಳೆಯರು ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ವೇಳೆ ಮೂವರು ಯುವಕರು ಏಕಾಏಕಿ ನೀರಿನ ಸುಳಿಗೆ ಸಿಲುಕಿದ್ದಾರೆ. ಅಲೆಗಳ ಹೊಡೆತಕ್ಕೆ ದಡಕ್ಕೆ ಬರಲಾಗದೆ ಸಮುದ್ರದಲ್ಲಿ ಮುಳುಗುತ್ತಿದ್ದ ಇವರನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜೀವದ ಹಂಗುತೊರೆದು ರಕ್ಷಿಸಿದ್ದಾರೆ.
ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ಜೀವ ರಕ್ಷಕ ಸಿಬ್ಬಂದಿಯಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಹಾಗೂ ಲೋಕೇಶ್ ಹರಿಕಂತ್ರ ಅವರು ನೀರಿಗಿಳಿದು ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯಾದ ದೀಪಕ್ ಗೌಡ ಮತ್ತು ಮಹೇಶ್ ಹೊಸಕಟ್ಟೆ ಅವರು ನೆರವಾಗಿದ್ದಾರೆ. ಪ್ರವಾಸಿಗರ ಜೀವ ಉಳಿಸಿದ ಸಿಬ್ಬಂದಿಯ ಸಾಹಸ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
