Spread the love

ಅಂಕೋಲಾ: ತಾಲೂಕಿನ ತೆಂಕಣಕೇರಿ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವೇಳೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಶಾಲೆಯ ವಿದ್ಯುತ್ ಸರ್ಕ್ಯೂಟ್‌ನಲ್ಲಿ ಉಂಟಾದ ದೋಷದಿಂದ (ಶಾರ್ಟ್ ಸರ್ಕ್ಯೂಟ್) ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ವೇಳೆ ಏಕಾಏಕಿ ಶಾಲಾ ಕಟ್ಟಡದಲ್ಲಿ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ವಿಷಯ ತಿಳಿದ ಸ್ಥಳೀಯ ಪೊಲೀಸರು ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದು ಗ್ರಾಮಸ್ಥರು ಹಾಗೂ ಪೋಷಕರು ಶಾಲೆಯ ಬಳಿ ಜಮಾಯಿಸಿದ್ದರು.

ಶಾಲೆ ಪುನರಾರಂಭದ ದಿನವೇ ದುರ್ಘಟನೆ: 

ದಸರಾ ರಜೆಯ ಬಳಿಕ ಶಾಲೆಗಳು ಪುನರಾರಂಭವಾಗಬೇಕಿದ್ದ ದಿನವೇ ಈ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಂಕಿಯಿಂದಾಗಿ ಶಾಲೆಯ ಕೊಠಡಿಗಳು, ಪೀಠೋಪಕರಣಗಳು, ಕಡತಗಳು ಹಾಗೂ ಶೈಕ್ಷಣಿಕ ಉಪಕರಣಗಳಿಗೆ ಉಂಟಾಗಿರುವ ಹಾನಿಯ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ. ಸಂಬಂಧಪಟ್ಟ ಶಿಕ್ಷಣ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಬೆಂಕಿ ಅವಘಡಕ್ಕೆ ನಿಖರ ಕಾರಣ ಹಾಗೂ ನಷ್ಟದ ವಿವರ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *