ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಅಥವಾ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಭೀಕರವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ನಡೆದಿದೆ. ಹೆದ್ದಾರಿಯ ನಡುವೆಯೇ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವುದರಿಂದ, ಅಂಕೋಲಾ-ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಅಗಸೂರು ಪಂಚಾಯತ್ ವ್ಯಾಪ್ತಿಯ ಕಂಚಿನಬಾಗಿಲು ಬಳಿ ಸಂಭವಿಸಿದ ಈ ಅಪಘಾತದಲ್ಲಿ, KA-48 A 2330 ನೋಂದಣಿ ಸಂಖ್ಯೆಯ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಉರುಳಿಬಿದ್ದಿದೆ. ವಾಹನ ಪಲ್ಟಿಯಾದ ಕೇವಲ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗನೆ ಉರಿಯಲಾರಂಭಿಸಿದೆ. ಟ್ಯಾಂಕರ್‌ನಲ್ಲಿ ಜ್ವಲನಶೀಲ ವಸ್ತು ಇದ್ದ ಕಾರಣ ಬೆಂಕಿಯ ತೀವ್ರತೆ ವಿಪರೀತವಾಗಿದ್ದು, ಆತಂಕಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು ಟ್ಯಾಂಕರ್ ಸಮೀಪ ಹೋಗಲೂ ಸಾಧ್ಯವಾಗದಂತಹ ಭೀಕರ ಸ್ಥಿತಿ ನಿರ್ಮಾಣವಾಗಿತ್ತು.
ಚಾಲಕನ ಸುಳಿವು ಲಭ್ಯವಿಲ್ಲ:
ಘಟನಾ ಸ್ಥಳದಲ್ಲಿ ಹೊತ್ತಿ ಉರಿಯುತ್ತಿರುವ ಟ್ಯಾಂಕರ್‌ನ ಚಾಲಕನ ಯಾವುದೇ ಸುಳಿವು ಇನ್ನೂ ಪತ್ತೆಯಾಗಿಲ್ಲ. ವಾಹನ ಪಲ್ಟಿಯಾಗುತ್ತಿದ್ದಂತೆ ಚಾಲಕ ಟ್ಯಾಂಕರ್‌ನಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ಶಂಕಿಸಿದ್ದಾರೆ. ಆದಾಗ್ಯೂ, ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಚಾಲಕ ಸಜೀವ ದಹನವಾಗಿರಬಹುದೇ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಈ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದುದರಿಂದ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ಮುಟ್ಟಿಸಲೂ ಸ್ಥಳೀಯರು ಹರಸಾಹಸ ಪಡಬೇಕಾಯಿತು.
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಅಂಕೋಲಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲಿ ಈ ಘಟನೆ ತೀವ್ರ ಆತಂಕ ಮೂಡಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಹಾಗೂ ಚಾಲಕನ ಸ್ಥಿತಿಯ ಕುರಿತು ತನಿಖೆ ಮುಂದುವರಿದಿದೆ.
