Spread the love

ಅಂಕೋಲಾ: ತಾಲೂಕಿನ ಡೋಂಗ್ರಿ ಪಂಚಾಯತ್ ವ್ಯಾಪ್ತಿಯ ಹಳವಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮನೆಯೊಂದರ ಹಿಂಬದಿಯ ಗೋಡೌನ್ ಬೀಗ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. 

ಹಳವಳ್ಳಿ ಪುನರ್ವಸತಿ ಕೇಂದ್ರದ ನಿವಾಸಿ ಹಾಗೂ ಕೃಷಿಕರಾಗಿರುವ 45 ವರ್ಷದ ರಾಮಕೃಷ್ಣ ನರಸಿಂಹ ಹರಿಮನೆ ಎಂಬುವವರು ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 14 ರ ಬೆಳಿಗ್ಗೆ 10 ಗಂಟೆಯಿಂದ ಸೆಪ್ಟೆಂಬರ್ 18 ರ ಬೆಳಿಗ್ಗೆ 10:30 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾರೋ ಅಪರಿಚಿತ ಕಳ್ಳರು ರಾಮಕೃಷ್ಣ ಅವರ ಮನೆಯ ಹಿಂಬದಿಯಲ್ಲಿರುವ ಗೋಡೌನ್ (ಗೋಡಾಣ) ಬಾಗಿಲ ದಂಡಿಯನ್ನು ಬೆಂಡ್ ಮಾಡಿ ಒಳಪ್ರವೇಶಿಸಿದ್ದಾರೆ. ಕೋಣೆಯಲ್ಲಿ ಭದ್ರವಾಗಿ ಇರಿಸಲಾಗಿದ್ದ ತಲಾ 71 ಕೆಜಿ ತೂಕದ 3 ಅಡಿಕೆ ಚೀಲಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಕಳುವಾದ ಒಟ್ಟು ಅಡಿಕೆಯ ಅಂದಾಜು ಮೌಲ್ಯ 90000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. 

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ 2023 ರ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ 331(3), 331(4) ಹಾಗೂ 305 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *