Spread the love

ಭಟ್ಕಳ: ನಗರದ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಇಂದು ಮಧ್ಯಾಹ್ನ ಭಟ್ಕಳದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿವೆ. ಈ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭದ್ರತೆಯ ದೃಷ್ಟಿಯಿಂದ ಭಟ್ಕಳದಲ್ಲಿ 900 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸಲು 5 ಕೆಎಸ್‌ಆರ್‌ಪಿ ಹಾಗೂ 2 ಡಿಆರ್ ತುಕಡಿಗಳನ್ನು ಭದ್ರತಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಉಡುಪಿ ಮತ್ತು ಭಟ್ಕಳ ಗಡಿ ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಶೇಷ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ 66 ರ ಮುರಿನಕಟ್ಟೆ ಪ್ರದೇಶದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿಡಲು ಇಲಾಖೆ ಮುಂದಾಗಿದೆ.

ಇಂದು ಮಧ್ಯಾಹ್ನ ಭಟ್ಕಳ ನಗರದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಈ ಮೆರವಣಿಗೆಯಲ್ಲಿ 5000 ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಮಧ್ಯಾಹ್ನ 3 ಗಂಟೆಗೆ ನಗರದ ಚನ್ನಪಟ್ಟಣ ಹನುಮದೇವಾಲಯದಿಂದ ಆರಂಭವಾಗಲಿರುವ ಈ ಪ್ರತಿಭಟನಾ ರ್ಯಾಲಿಯು ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಸಾಗಲಿದೆ. ಮೆರವಣಿಗೆಯ ಅಂತ್ಯದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಸಂಘಟನೆಗಳ ಮುಖಂಡರು ಔಪಚಾರಿಕವಾಗಿ ಮನವಿ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *