ಸಿದ್ದಾಪುರ: ಜಿಲ್ಲೆಯ ಸಿದ್ದಾಪುರದಲ್ಲಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಖಾಸಗಿ ಉದ್ಯೋಗಿಯೊಬ್ಬರಿಗೆ ಬರೋಬ್ಬರಿ ₹11.53 ಲಕ್ಷ ವಂಚಿಸಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ಪ್ರಕರಣ ದಾಖಲಾಗಿದೆ. ಚಪ್ಪರಮನೆ ನಿವಾಸಿ ರಾಘವೇಂದ್ರ ಗಜಾನನ ಹೆಗಡೆ (39) ವಂಚನೆಗೊಳಗಾದ ವ್ಯಕ್ತಿ.
ಹೆಚ್ಚಿನ ಲಾಭದ ಆಸೆಗೆ ಬಿದ್ದ ಉದ್ಯೋಗಿ
ಅಪರಿಚಿತ ಆರೋಪಿಗಳು ಜಾಬ್ ಪ್ಲಾಟ್‌ಫಾರ್ಮ್ ಮೂಲಕ ರಾಘವೇಂದ್ರ ಅವರನ್ನು ಸಂಪರ್ಕಿಸಿ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ ಅವರು 2025ರ ಅಕ್ಟೋಬರ್ 7 ರಿಂದ ನವೆಂಬರ್ 5ರ ನಡುವೆ ತಮ್ಮ ಆಕ್ಸಿಸ್ ಬ್ಯಾಂಕ್ (Axis Bank) ಖಾತೆಯಿಂದ ₹5.53 ಲಕ್ಷ ಹಾಗೂ ಕೆಡಿಸಿಸಿ (KDCC) ಬ್ಯಾಂಕ್ ಖಾತೆಯಿಂದ ₹6 ಲಕ್ಷ ಸೇರಿದಂತೆ ಒಟ್ಟು ₹11.53 ಲಕ್ಷ ಹಣವನ್ನು ಹಂತಹಂತವಾಗಿ ಯುಪಿಐ, ಆರ್‌ಟಿಜಿಎಸ್ (RTGS) ಹಾಗೂ ನೆಫ್ಟ್ (NEFT) ಮೂಲಕ ವರ್ಗಾಯಿಸಿದ್ದರು.
ಹಣ ವಿತ್‌ಡ್ರಾ ಮಾಡಲು ಹೋದಾಗ ಬಯಲಾದ ವಂಚನೆ
ರಾಘವೇಂದ್ರ ಅವರು ತಾವು ಹೂಡಿಕೆ ಮಾಡಿದ್ದ ಹಣ ಹಾಗೂ ಲಾಭವನ್ನು ಹಿಂಪಡೆಯಲು ಮುಂದಾದಾಗ, ‘Lenscart Solution IPO’ ಆಯ್ಕೆಯಾಗಿದ್ದು, ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಹಣ ಪಾವತಿಸುವಂತೆ ಆರೋಪಿಗಳು ಬೇಡಿಕೆಯಿಟ್ಟಿದ್ದಾರೆ. ಇದರಿಂದ ಅನುಮಾನಗೊಂಡು ತಾವು ಮೋಸ ಹೋಗಿರುವುದನ್ನು ಅರಿತ ಅವರು, ಸೈಬರ್ ಕ್ರೈಮ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಸದ್ಯ ಸಿದ್ದಾಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
