ಕಾರವಾರ: ತಮಿಳುನಾಡಿನಿಂದ ಗೋವಾ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ಸುಮಾರು 1.48 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಅನ್ನು ಖದೀಮರು ಕದ್ದೊಯ್ದಿರುವ ಘಟನೆ ಕಾರವಾರ ತಾಲೂಕಿನ ಅಶ್ನೋಟಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ವಿವರ: ತಮಿಳುನಾಡಿನ ತಿರುವನೆಲ್ವೇಲಿ ಜಿಲ್ಲೆಯ ಐ. ಜಾನ್ ಥಾಮಸ್ (56) ಕಳ್ಳತನಕ್ಕೊಳಗಾದವರು. ಇವರು ಸೆಪ್ಟೆಂಬರ್ 30ರಂದು ತಮ್ಮ ಪತ್ನಿಯೊಂದಿಗೆ ರೈಲು ಸಂಖ್ಯೆ 22630 (TEN LTT SF Express) ರಲ್ಲಿ ತಿರುನೆಲ್ವೇಲಿ ಜಂಕ್ಷನ್ನಿಂದ ಮಡಗಾಂವ್ ಜಂಕ್ಷನ್ಗೆ ಪ್ರಯಾಣ ಬೆಳೆಸಿದ್ದರು. ಅಕ್ಟೋಬರ್ 1ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಾರವಾರದ ಅಶ್ನೋಟಿ ರೈಲ್ವೆ ನಿಲ್ದಾಣದಲ್ಲಿ ಕ್ರಾಸಿಂಗ್ಗಾಗಿ ರೈಲು ನಿಂತಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬರು 1,48,399 ರೂ. ಮೌಲ್ಯದ ವಸ್ತುಗಳಿದ್ದ ಬಿಳಿ ಬಣ್ಣದ ಕೈಚೀಲವನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.
ಝೀರೋ ಎಫ್ಐಆರ್ ವರ್ಗಾವಣೆ:
ಘಟನೆ ಕುರಿತು ಜಾನ್ ಥಾಮಸ್ ಅವರು ಅಕ್ಟೋಬರ್ 2ರಂದು ಗೋವಾದ ಮಡಗಾಂವ್ ಕೊಂಕಣ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲಿ ಬಿಎನ್ಎಸ್-2023ರ ಕಲಂ 305(ಸಿ) ಅಡಿಯಲ್ಲಿ ಝೀರೋ ಎಫ್ಐಆರ್ (Zero FIR) ದಾಖಲಿಸಿಕೊಳ್ಳಲಾಗಿತ್ತು. ಆದರೆ, ಕಳ್ಳತನ ನಡೆದ ಸ್ಥಳ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ, ಪ್ರಕರಣವನ್ನು ಮರು-ನೋಂದಣಿ ಹಾಗೂ ಮುಂದಿನ ತನಿಖೆಗಾಗಿ ಚಿತ್ತಾಕುಲ ಠಾಣೆಗೆ ವರ್ಗಾಯಿಸಲಾಗಿದೆ. ಇದೀಗ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
