Spread the love

ಹೊನ್ನಾವರ: ಸಾಮಾನ್ಯವಾಗಿ ಪುಟ್ಟ ಮಕ್ಕಳು ಆಟವಾಡುತ್ತಾ, ಅಂಬೆಗಾಲಿಡುತ್ತಾ ಬಾಲ್ಯ ಕಳೆಯುವ ವಯಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದ ಬಾಲಕಿ ಸ್ವರಶ್ರೀ ಹೆಗಡೆ ತಬಲಾ ನಾದದ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಕೇವಲ 2 ವರ್ಷ 10 ತಿಂಗಳ ವಯಸ್ಸಿನಲ್ಲೇ 12 ತಾಳಗಳನ್ನು ಅವುಗಳ ಬೋಲ್‌ಗಳನ್ನು ಹೇಳುತ್ತಾ ತಪ್ಪಿಲ್ಲದೆ ನುಡಿಸುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಅತ್ಯಂತ ಕಿರಿಯ ತಬಲಾ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಸಂಗೀತವೇ ಉಸಿರಾಗಿರುವ ಕುಟುಂಬ

ಸ್ವರಶ್ರೀ ಖ್ಯಾತ ತಬಲಾವಾದಕ ಗುರುರಾಜ ಹೆಗಡೆ ಆಡುಕಳ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕಿ ಮತ್ತು ಹಿಂದೂಸ್ಥಾನಿ ಗಾಯಕಿ ಶ್ರೀಲತಾ ಅವರ ಪುತ್ರಿ. ತಂದೆ ಗುರುರಾಜ ಹೆಗಡೆ ಅವರು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯರಾಗಿದ್ದು, ದೇಶದ ಪ್ರಮುಖ ವೇದಿಕೆಗಳಲ್ಲಿ ಹಿರಿಯ ಸಂಗೀತಗಾರರಿಗೆ ತಬಲಾ ಸಾಥ್ ನೀಡುತ್ತಿದ್ದಾರೆ. ಜೊತೆಗೆ 50ಕ್ಕೂ ಹೆಚ್ಚು ಶಿಷ್ಯರಿಗೆ ತಬಲಾ ತರಬೇತಿ ನೀಡುತ್ತಿದ್ದಾರೆ. ತಾಯಿ ಶ್ರೀಲತಾ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪಡೆದಿದ್ದು, ದಂಪತಿ ಹೊನ್ನಾವರದಲ್ಲಿ ಸಂಗೀತ ಶಾಲೆಯನ್ನೂ ನಡೆಸುತ್ತಿದ್ದಾರೆ.

ಇಂತಹ ಸಂಗೀತಮಯ ವಾತಾವರಣದಲ್ಲಿ ಬೆಳೆಯುತ್ತಿರುವ ಸ್ವರಶ್ರೀಗೆ ಅತಿ ಚಿಕ್ಕ ವಯಸ್ಸಿನಲ್ಲೇ ತಬಲಾದ ಮೇಲೆ ಆಸಕ್ತಿ ಮೂಡಿತ್ತು. ಕೇವಲ 12ರಿಂದ 14 ತಿಂಗಳ ಮಗುವಾಗಿದ್ದಾಗಲೇ ತಬಲಾದತ್ತ ಆಕರ್ಷಿತಳಾಗಿದ್ದಳು. ಒಂದು ವರ್ಷ ಕಳೆದಾಗ ತಬಲಾದ ಮೇಲೆ ಕೈಯಾಡಿಸುತ್ತಾ, ಅದರೊಂದಿಗೇ ಮಲಗುತ್ತಿದ್ದ ಮಗಳ ಆಸಕ್ತಿಯನ್ನು ಗಮನಿಸಿದ ಪೋಷಕರು ಆಕೆಗೆಂದೇ 2 ಪುಟ್ಟ ತಬಲಾಗಳನ್ನು ಮಾಡಿಸಿಕೊಟ್ಟಿದ್ದರು.

ತಂದೆಯ ಪಾಠವೇ ಪುಟ್ಟ ಬಾಲಕಿಗೆ ಪ್ರೇರಣೆ

ತಂದೆ ಗುರುರಾಜ ಹೆಗಡೆ ಅವರು ತಮ್ಮ ಶಿಷ್ಯರಿಗೆ ತಬಲಾ ಪಾಠ ಹೇಳಿಕೊಡುವಾಗ ಸ್ವರಶ್ರೀಯೂ ಅವರ ಪಕ್ಕದಲ್ಲೇ ಕುಳಿತು ಗಮನಿಸುತ್ತಿದ್ದಳು. ಮಗಳ ಆಸಕ್ತಿಯನ್ನು ಅರಿತ ತಂದೆ ಆಕೆಗೆ 12 ತಾಳಗಳನ್ನು ಅವುಗಳ ಬೋಲ್‌ಗಳ ಸಹಿತ ಕಲಿಸಿದರು. ಅಚ್ಚರಿಯೆಂದರೆ, ಇಷ್ಟು ಚಿಕ್ಕ ವಯಸ್ಸಿನಲ್ಲೇ ಸ್ವರಶ್ರೀ ತಾಳಗಳನ್ನು ನೆನಪಿಟ್ಟುಕೊಂಡು ನಿಖರವಾಗಿ ನುಡಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾಳೆ.

ಪುಟ್ಟ ವಯಸ್ಸಿನಲ್ಲೇ ಸಂಗೀತದ ಮೇಲೆ ಇಷ್ಟೊಂದು ಹಿಡಿತ ಸಾಧಿಸಿ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಸ್ವರಶ್ರೀಯ ಸಾಧನೆಗೆ ಕುಟುಂಬದವರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೋಷಕರ ಪ್ರೋತ್ಸಾಹ, ಸಂಗೀತದ ವಾತಾವರಣ ಮತ್ತು ಬಾಲಕಿಯ ಅಪಾರ ಆಸಕ್ತಿ ಒಂದಾಗಿ ಮೂಡಿಬಂದಿರುವ ಈ ಸಾಧನೆ ಹೊನ್ನಾವರ ತಾಲೂಕಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸಿದೆ.

Leave a Reply

Your email address will not be published. Required fields are marked *