ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟು ಶೇ. 75.62 ರಷ್ಟು ಬಂಪರ್ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿಗದಿಯಂತೆ ನಾಲ್ಕೂ ಜಿಲ್ಲೆಗಳ ಒಟ್ಟು 137 ಮತದಾನ ಕೇಂದ್ರಗಳಲ್ಲಿ ಬಿರುಸಿನ ಮತದಾನ ನಡೆಯಿತು. ಪದವೀಧರ ಮತದಾರರು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆಯಿಂದಲೇ ಚುರುಕಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಶೇ. 49.45ರ ಗಡಿ ದಾಟಿ, ಸಂಜೆ ಮುಕ್ತಾಯದ ವೇಳೆಗೆ ಶೇ. 75.62 ತಲುಪಿದೆ.

ಜಿಲ್ಲಾವಾರು ಅಂತಿಮ ಮತದಾನದ ವಿವರ: ನಾಲ್ಕೂ ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಾವೇರಿ ಜಿಲ್ಲೆ ಅತಿ ಹೆಚ್ಚು ಮತದಾನದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
- ಹಾವೇರಿ: ಶೇ. 78.71 (ಒಟ್ಟು 24,648 ಮತದಾರರ ಪೈಕಿ 19,401 ಮಂದಿ ಮತದಾನ)
- ಗದಗ: ಶೇ. 77.66 (ಒಟ್ಟು 21,594 ಮತದಾರರ ಪೈಕಿ 16,770 ಮಂದಿ ಮತದಾನ)
- ಉತ್ತರ ಕನ್ನಡ: ಶೇ. 76.52 (ಒಟ್ಟು 16,039 ಮತದಾರರ ಪೈಕಿ 12,273 ಮಂದಿ ಮತದಾನ)
- ಧಾರವಾಡ: ಶೇ. 71.80 (ಒಟ್ಟು 35,119 ಮತದಾರರ ಪೈಕಿ 25,214 ಮಂದಿ ಮತದಾನ)
ಒಟ್ಟು 73,658 ಮಂದಿ ಹಕ್ಕು ಚಲಾವಣೆ: ಮತಕ್ಷೇತ್ರ ವ್ಯಾಪ್ತಿಯ 4 ಜಿಲ್ಲೆಗಳು ಸೇರಿ ಒಟ್ಟು 97,400 ನೋಂದಾಯಿತ ಮತದಾರರಿದ್ದರು. ಈ ಪೈಕಿ 45,110 ಪುರುಷರು ಹಾಗೂ 28,548 ಮಹಿಳೆಯರು ಸೇರಿ ಒಟ್ಟು 73,658 ಪದವೀಧರರು ಇಂದಿನ ಹಬ್ಬದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾರರಲ್ಲಿ ಮೂಡಿಸಿದ ಜಾಗೃತಿ ಹಾಗೂ ಅಭ್ಯರ್ಥಿಗಳ ಸಹಕಾರದಿಂದ ಯಾವುದೇ ಅಹಿತಕರ ಘಟನೆಗಳಿಲ್ಲದೆ ಚುನಾವಣೆ ಸಂಪೂರ್ಣ ಶಾಂತಿಯುತವಾಗಿ ಸುಸೂತ್ರವಾಗಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
