ಅಂಕೋಲಾ: ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಆಟೋ ರಿಕ್ಷಾಕ್ಕೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾದ ಘಟನೆ ತಾಲೂಕಿನ ಮಾದನಗೇರಿ ಹಿಲ್ಲೂರು ಕ್ರಾಸ್ ಬಳಿ ನಡೆದಿದೆ.
ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಲಾರಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದ್ದು, ಗುರುತಿಸಲಾಗದಷ್ಟು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಅಪಘಾತದ ಸಂದರ್ಭದಲ್ಲಿ ಆಟೋದಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಲಾರಿಯ ಕ್ಲೀನರ್ ಗಾಯಗೊಂಡಿದ್ದಾನೆ.
ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
