ಕಾರವಾರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿಯಾಗಲು ಗೋವಾಕ್ಕೆ ತೆರಳಿದ್ದ ವೃದ್ಧರ ಮನೆಯ ಬೀಗ ಮುರಿದು ಕಪಾಟಿನಲ್ಲಿದ್ದ 2.60 ಲಕ್ಷ ನಗದು ಕಳ್ಳತನ ಮಾಡಿರುವ ಘಟನೆ ಕಾರವಾರ ನಗರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರದ ನಿವಾಸಿ, 82 ವರ್ಷದ ನಿವೃತ್ತ ನೌಕರ ಸುರೇಶ ಲಕ್ಷ್ಮಣ ನಾಯ್ಕ ಅವರು ಕಳ್ಳತನದ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರು ಹಾಗೂ ಅವರ ಪತ್ನಿ ದೀಪಾವಳಿ ಹಬ್ಬದ ಸಲುವಾಗಿ ಗೋವಾದಲ್ಲಿರುವ ಮಕ್ಕಳ ಮನೆಗೆ ತೆರಳುವ ಮುನ್ನ ಮನೆಯ ಕಪಾಟಿನ ಲಾಕರ್‌ನಲ್ಲಿ 2.50 ಲಕ್ಷ ಹಾಗೂ ಕಪಾಟಿನ ತೆರೆದ ಡ್ರಾವರ್‌ನಲ್ಲಿ 10 ಸಾವಿರ ನಗದು ಇಟ್ಟಿದ್ದರು. ಲಾಕರ್‌ನಲ್ಲಿಟ್ಟಿದ್ದ ಹಣದಲ್ಲಿ ಕಳೆದ ತಿಂಗಳು ಎಸ್‌ಬಿಐ ಎಟಿಎಂನಿಂದ ಪಡೆದ 1 ಲಕ್ಷ ಹಾಗೂ ಈ ಹಿಂದೆ ಕೂಡಿಸಿಟ್ಟಿದ್ದ 1.60 ಲಕ್ಷ ಸೇರಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 5ರಂದು ರಾತ್ರಿ ಸುಮಾರು 10 ಗಂಟೆಗೆ ಮನೆಯ ಪಕ್ಕದಲ್ಲೇ ವಾಸಿಸುವ ದೂರುದಾರರ ಅಣ್ಣನ ಮಗ ಗಿರಿಧರ ಅವರು ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ್ದರು. ಆದರೆ, ನವೆಂಬರ್ 6ರಂದು ಬೆಳಿಗ್ಗೆ ಸುಮಾರು 6.30ಕ್ಕೆ ಮನೆಯ ಬಾಗಿಲು ತೆರೆದಿರುವುದಾಗಿ ದೂರುದಾರರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ತಕ್ಷಣ ಗೋವಾದಿಂದ ಕಾರವಾರಕ್ಕೆ ಮರಳಿದ ಸುರೇಶ ನಾಯ್ಕ ಅವರು ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ಮುಖ್ಯ ಬಾಗಿಲಿನ ಲಾಕ್‌ನ ಹುಕ್ ಮುರಿದಿರುವುದು ಕಂಡುಬಂದಿದೆ. ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕರ್ ಒಡೆದು ಅದರಲ್ಲಿದ್ದ 2.50 ಲಕ್ಷ ಹಾಗೂ ಡ್ರಾವರ್‌ನಲ್ಲಿದ್ದ 10 ಸಾವಿರ ಸೇರಿದಂತೆ ಒಟ್ಟು 2.60 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 331(4) ಮತ್ತು 305ರ ಪ್ರಕಾರ ಪ್ರಕರಣ ದಾಖಲಾಗಿದೆ.
