Spread the love

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಯ ‘ಸ್ಟರ್ಲಿಂಗ್ ರಿವರ್ ರೆಸಾರ್ಟ್’ನಲ್ಲಿ ಜಿಪ್‌ಲೈನ್ ಆಟವಾಡುವಾಗ 30-40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗರೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ? 

ಕಳೆದ ಜುಲೈ 3 ರಂದು ವಿಜಯಪುರ ನಿವಾಸಿ ಕುಬೇರ ಸುರಪುರ (40) ಎಂಬುವವರು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕುಬೇರ ಅವರು ಜಿಪ್‌ಲೈನ್‌ನಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಅದರ ಬೆಲ್ಟ್ (ಲಾಕ್) ಕಟ್ ಆಗಿದೆ. ಪರಿಣಾಮ ಅವರು ಸುಮಾರು 40 ಅಡಿ ಎತ್ತರದಿಂದ ನೇರವಾಗಿ ಕೆಳಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದ ಅವರ ಸಹೋದರನ ಮೊಬೈಲ್ ಫೋನ್‌ನಲ್ಲಿ ಲೈವ್ ಆಗಿ ಸೆರೆಯಾಗಿತ್ತು.

ಮಾಲೀಕ ಸೇರಿ ಮೂವರ ವಿರುದ್ಧ ಕೇಸ್ 

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಬೇರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ, ಪವನ್ ಅವರ ಮೇಲೆ BNS 2023ರ ಕಲಂ 289, 125(B), ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕುಟುಂಬಸ್ಥರ ಆಕ್ರೋಶ ಮತ್ತು ಗಾಯಾಳುವಿನ ಸ್ಥಿತಿ 

ಕೆಳಗೆ ಬಿದ್ದ ರಭಸಕ್ಕೆ ಕುಬೇರ ಅವರ ಎರಡೂ ಕೈ ಹಾಗೂ ಕಾಲುಗಳ ಮೂಳೆಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ. ದಾಂಡೇಲಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವಿಜಯಪುರದ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಸ್ಟರ್ಲಿಂಗ್ ರಿವರ್ ರೆಸಾರ್ಟ್ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತ ನಡೆದ ಆರಂಭದಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್ ಆಡಳಿತ ಮಂಡಳಿ, ಇದೀಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಾಯಾಳುವಿನ ಕುಟುಂಬ ಗಂಭೀರ ಆರೋಪ ಮಾಡಿದೆ.

ರೆಸಾರ್ಟ್ ಮ್ಯಾನೇಜರ್ ಸ್ಪಷ್ಟನೆ 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಸಾರ್ಟ್ ಮ್ಯಾನೇಜರ್, “ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಿದ್ದಲ್ಲ, ತಾಂತ್ರಿಕ ದೋಷದಿಂದ ಸಂಭವಿಸಿದ ಆಕಸ್ಮಿಕ ಘಟನೆಯಾಗಿದೆ. ನಾವು ನಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ, ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಯುವಕನ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *