Spread the love

ಜೋಯಿಡಾ: ಮುಂಜಾನೆ ಶೌಚಕ್ಕೆಂದು ಮನೆ ಬಾಗಿಲು ತೆಗೆದ ವೃದ್ಧೆಯೊಬ್ಬರ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ಮಾಡಿರುವ ಭೀಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಇಂದು (ಸೋಮವಾರ) ಬೆಳಗಿನ ಜಾವ ನಡೆದಿದೆ.

ತಾಲೂಕಿನ ಕಾಳಿ ಹುಲಿ ಯೋಜನೆಯ (Kali Tiger Reserve) ಪಣಸೂಲಿ ವಲಯ ವ್ಯಾಪ್ತಿಯ ಅವುರ್ಲಿ ದಾಬೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಚಿರತೆ ದಾಳಿಯಿಂದಾಗಿ ಇಡೀ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ನಿವಾಸಿ ಸುಶಿಲಾ ಶಾಂತಾರಾಮ್ ದೇವಿದಾಸ (70) ಎಂಬ ವೃದ್ಧೆ ಚಿರತೆ ದಾಳಿಗೆ ತುತ್ತಾದ ದುರ್ದೈವಿ. ಇಂದು (ಮೇ 4, ಸೋಮವಾರ) ಬೆಳಗಿನ ಜಾವ ಸುಮಾರು 4:00 ಗಂಟೆಯ ವೇಳೆಗೆ ಸುಶಿಲಾ ಅವರು ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬರಲು ಬಾಗಿಲು ತೆಗೆದಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಹೊಂಚು ಹಾಕಿ ಕುಳಿತಿದ್ದ ಚಿರತೆ ಅವರ ಮೇಲೆ ದಿಢೀರ್ ದಾಳಿ ಮಾಡಿದೆ. ಚಿರತೆಯ ಈ ಭೀಕರ ದಾಳಿಯಿಂದಾಗಿ ವೃದ್ಧೆ ಸುಶಿಲಾ ಅವರ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರು ಅಸ್ವಸ್ಥಗೊಂಡಿದ್ದಾರೆ.

ಅರಣ್ಯ ಇಲಾಖೆಗೆ ಮಾಹಿತಿ, ಚಿಕಿತ್ಸೆಗೆ ಆಗ್ರಹ

ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಜಮಾಯಿಸಿದ ಸ್ಥಳೀಯರು, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ಅಸ್ವಸ್ಥಗೊಂಡಿರುವ ವೃದ್ಧೆಗೆ ಉತ್ತಮ ಹಾಗೂ ಹೆಚ್ಚಿನ ಚಿಕಿತ್ಸೆ ಕೊಡಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಣಸೋಲಿ ವಲಯ ಅರಣ್ಯಾಧಿಕಾರಿ (RFO) ರವಿಕಿರಣ್ ಸಂಪಗಾವಿ ಅವರು, ಗಾಯಾಳು ವೃದ್ಧೆಯ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಗತ್ಯಬಿದ್ದರೆ ಹೆಚ್ಚಿನ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಿದ್ದಾರೆ. ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *