Spread the love

ಜೋಯಿಡಾ: ಜಿಲ್ಲೆಯ ರಾಮನಗರ ಮತ್ತು ಜೋಯಿಡಾ ಮಾರ್ಗಮಧ್ಯೆ ಗುರುವಾರ ಬೆಳಿಗ್ಗೆ ಎರಡು ಬಸ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಾಲೂಕಿನ ಚಾಪೋಲಿ ಕ್ರಾಸ್ ಸಮೀಪ ಈ ಅಪಘಾತ ನಡೆದಿದ್ದು, ಉಳವಿಯಿಂದ ಇಚಲಕರಂಜಿಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಬೆಳಗಾವಿಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಬಸ್‌ಗಳು ಪರಸ್ಪರ ಗುದ್ದಿಕೊಂಡಿವೆ. 

ಬೆಳಗಾವಿ-ಅಂಕೋಲಾ ಬಸ್‌ನಲ್ಲಿ ಜೋಯಿಡಾಕ್ಕೆ ತೆರಳುತ್ತಿದ್ದ ಹೆಚ್ಚಿನ ಸಂಖ್ಯೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಓರ್ವ ಬಸ್ ಚಾಲಕನಿಗೆ ಗಾಯಗಳಾಗಿವೆ. ಇದರ ಜೊತೆಗೆ ಬಸ್‌ನಲ್ಲಿದ್ದ ಹಲವು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸೇರಿ 30ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

​ಅಪಘಾತ ನಡೆದ ಸ್ಥಳವು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಹಾಗೂ ಅಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಇಲ್ಲದ ಕಾರಣ ತಕ್ಷಣಕ್ಕೆ ವೈದ್ಯಕೀಯ ಸಹಾಯ ಪಡೆಯಲು ತೀವ್ರ ಅಡ್ಡಿಯಾಗಿತ್ತು. ಆದರೆ, ಆತಂಕದ ನಡುವೆಯೂ ಸಮಯಪ್ರಜ್ಞೆ ಮೆರೆದ ಕೆಲ ಪ್ರಯಾಣಿಕರು ಮೊಬೈಲ್ ನೆಟ್‌ವರ್ಕ್ ಹುಡುಕಿಕೊಂಡು ಸಮೀಪದ ಗುಡ್ಡವೊಂದನ್ನು ಏರಿ, ಅಲ್ಲಿಂದ ಆಂಬುಲೆನ್ಸ್ ಸಿಬ್ಬಂದಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 

ತಕ್ಷಣ ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ಹಾಗೂ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಜೋಯಿಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *