Spread the love

ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬುಧವಾರ ಉಪಲೋಕಾಯುಕ್ತರು ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ವೇಳೆ ಘಟಕದ ಸುತ್ತಮುತ್ತಲಿನ ಅವೈಜ್ಞಾನಿಕ ಹಾಗೂ ಅಸ್ವಚ್ಛ ವಾತಾವರಣವನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕರ್ತವ್ಯ ಲೋಪವೆಸಗಿದ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದನ್ನು ಹಾಗೂ ಸ್ಥಳೀಯ ಪರಿಸರ ಹಾಳಾಗುತ್ತಿರುವುದನ್ನು ಕಂಡು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತ್ಯಾಜ್ಯ ಘಟಕದಲ್ಲಿ ಒಣ ಹಾಗೂ ಹಸಿ ಕಸದ ವಿಲೇವಾರಿ ಅತ್ಯಂತ ವಿಳಂಬವಾಗಿ ನಡೆಯುತ್ತಿದ್ದು, ಸುತ್ತಮುತ್ತಲಿನ ಚರಂಡಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲದಿರುವುದು ಭೇಟಿಯ ವೇಳೆ ಕಂಡುಬಂದಿದೆ. ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ ‘ಲೆಗೆಸಿ ವೇಸ್ಟ್’ ಬೆಟ್ಟದಂತೆ ಶೇಖರಣೆಯಾಗಿದ್ದರೂ, ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದಿರುವುದು ಬೆಳಕಿಗೆ ಬಂದಿದೆ. 

ಘಟಕದಿಂದ ಹೊರಬರುವ ಕಲುಷಿತ ದ್ರವ ತ್ಯಾಜ್ಯವು (ಲೆಚೇಟ್) ನೇರವಾಗಿ ಭೂಮಿಗೆ ಇಂಗುತ್ತಿದ್ದು, ಸುತ್ತಮುತ್ತಲಿನ ಬಾವಿ ಹಾಗೂ ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸುವ ಭೀತಿ ಎದುರಾಗಿದೆ. ಇದರ ಜೊತೆಗೆ ಸೊಳ್ಳೆ, ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದ್ದು, ನಾಯಿಗಳ ಹಿಂಡು ಸಾರ್ವಜನಿಕರು ಹಾಗೂ ಮಕ್ಕಳಿಗೆ ತೀವ್ರ ಬೆದರಿಕೆಯೊಡ್ಡಿವೆ.

ಈ ಗಂಭೀರ ಸಮಸ್ಯೆಯ ಕುರಿತು ಸ್ವಯಂಪ್ರೇರಿತವಾಗಿ ಸುಮೊಟೊ (Suo Motu) ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ ಉಪಲೋಕಾಯುಕ್ತರು, ಘಟಕದ ವೈಜ್ಞಾನಿಕ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ತಕ್ಷಣವೇ ನಿರ್ದೇಶನ ನೀಡಿದರು. ಈ ಸಮಿತಿಯಲ್ಲಿ ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ (PWD), ಪುರಸಭೆ, ಜಿ.ಪಂ. ಸಿಇಒ ಹಾಗೂ ವೈದ್ಯಾಧಿಕಾರಿಗಳನ್ನು ಸೇರ್ಪಡೆಗೊಳಿಸಿ ಸಮಗ್ರ ಸರ್ವೇ ನಡೆಸಲು ಸೂಚಿಸಲಾಗಿದೆ. 

ಅಲ್ಲದೆ, ಸಮಿತಿಯು ಪ್ರತಿ ತಿಂಗಳು ಕೈಗೊಂಡ ಕ್ರಮಗಳ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯಬಿದ್ದರೆ ಈ ತ್ಯಾಜ್ಯ ಘಟಕವನ್ನು ಜನವಾಸವಿಲ್ಲದ ಅರಣ್ಯ ಅಥವಾ ಸೂಕ್ತ ಜಾಗಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *