Spread the love

ಶಿರಸಿ: ತಾಲೂಕಾ ಆಡಳಿತ ಕಚೇರಿಯಲ್ಲಿ ನಡೆದ ಬನವಾಸಿ ಹೋಬಳಿಯ ತ್ರೈಮಾಸಿಕ ಸಭೆಯು ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಶಿರಸಿ-ಹಾವೇರಿ ಹೆದ್ದಾರಿ ಹಾಗೂ ಬನವಾಸಿ ವಿದ್ಯುತ್ ಗ್ರಿಡ್ ವಿವಾದದ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಗಿದೆ. ಸಭೆಯಲ್ಲಿ ರಸ್ತೆ ದುರವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಸಭೆಯ ಆರಂಭದಲ್ಲೇ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ್ ನಾಯ್ಕ ಮಳಲಗಾಂವ ಅವರು ರೈತರು ಹಾಗೂ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದರು. ಕಳೆದ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿದ್ಯುತ್ ಗ್ರಿಡ್ ಕಾಮಗಾರಿ ಹಾಗೂ ಹಿಂದಿನ ಸರ್ಕಾರದ ಅವಧಿಯ ಏತ ನೀರಾವರಿ ಯೋಜನೆಗಳ ಕುರಿತು ಪ್ರಸ್ತಾಪಿಸಿ ತೀವ್ರ ಅಸಮಾಧಾನ ಹೊರಹಾಕಿದರು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಅಭಿವೃದ್ಧಿ ಕಾಮಗಾರಿಗಳ ಕುರಿತು ಉತ್ತರಿಸಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಸಭೆಗೆ ಗೈರಾಗಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಬಳಿಕ ಸಭೆಯಿಂದ ಹೊರನಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಪ್ರಶ್ನೆಗಳಿಗೆ ಹಾಗೂ ಅಸಮಾಧಾನಕ್ಕೆ ಉತ್ತರಿಸಿದ ಶಾಸಕ ಶಿವರಾಮ್ ಹೆಬ್ಬಾರ್, ಶಿರಸಿ-ಹಾವೇರಿ ಹೆದ್ದಾರಿಯು (766EE) ರಾಜ್ಯ ಸರ್ಕಾರದ ಅಧೀನಕ್ಕೆ ಬರುವುದಿಲ್ಲ, ಬದಲಾಗಿ ಇದು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಗೆ ಸೇರುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಕೇವಲ ಸಂಸದರಿಗೆ ಮಾತ್ರ ಇರುತ್ತದೆ. ರಸ್ತೆ ದುರಸ್ತಿ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರಿಗೆ 3 ಪ್ರತ್ಯೇಕ ಪತ್ರಗಳನ್ನು ಬರೆಯಲಾಗಿದೆ. ಪ್ರಸ್ತುತ ರಸ್ತೆಯ ದುರವಸ್ಥೆಯಿಂದಾಗಿ ಜನರಿಗೆ ಮಾತ್ರವಲ್ಲ, ಸ್ವತಃ ನನಗೂ ಆ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.

ಇನ್ನು ಬನವಾಸಿ ವಿದ್ಯುತ್ ಗ್ರಿಡ್ ಯೋಜನೆ ವಿಳಂಬದ ಬಗ್ಗೆಯೂ ಮಾಹಿತಿ ನೀಡಿದ ಶಾಸಕರು, ಗ್ರಿಡ್‌ಗಾಗಿ ಜಾಗ ಮಂಜೂರು ಮಾಡಿಸಿ 100 ಟನ್ ಸಾಮರ್ಥ್ಯದ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೇವಲ 2 ವಿದ್ಯುತ್ ಕಂಬಗಳ ಅಳವಡಿಕೆ ವಿಚಾರವಾಗಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿರುವುದರಿಂದ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ ಎಂದರು. ಈ ಕಾನೂನು ವಿವಾದವನ್ನು ಬಗೆಹರಿಸಲು ಸ್ಥಳೀಯರೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ. ಈ ಭಾಗದ ಏತ ನೀರಾವರಿ ಯೋಜನೆಗೆ 1000 ಕಿಲೋ ವ್ಯಾಟ್ ವಿದ್ಯುತ್ ಅಗತ್ಯವಿದ್ದು, ಗ್ರಿಡ್ ಕಾಮಗಾರಿ ಪೂರ್ಣಗೊಂಡು ವಿದ್ಯುತ್ ಪೂರೈಕೆಯಾದರಷ್ಟೇ ನೀರಾವರಿ ಯೋಜನೆಗೆ ಚಾಲನೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. 

ಈ ತ್ರೈಮಾಸಿಕ ಸಭೆಯಲ್ಲಿ ತಹಶೀಲ್ದಾರ್ ಪುಟ್ಟರಾಜ ಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *