ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಪದೇ ಪದೇ ಮಾಹಿತಿ ಹಕ್ಕು ಕಾಯ್ದೆಯಲ್ಲಿ(RTI) ಮಾಹಿತಿ ಕೇಳುತ್ತಿದ್ದ ನಾಲ್ವರನ್ನು ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.

ಕಪ್ಪು ಪಟ್ಟಿ ಸೇರಿದವರಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಅವರು ಸಲ್ಲಿಸುವ ಯಾವುದೇ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕಾರ ಮಾಡದಂತೆ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಡಾ.ಹೆಚ್.ಸಿ ಸತ್ಯನ್ ಆದೇಶ ಮಾಡಿದ್ದಾರೆ.
ಕೋಲಾರ ನಗರದ ಎಂ.ಶಂಕರ್, ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಎಂ.ಜಗದೀಶ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಊದವಾರಪಲ್ಲಿ ಇ ರಾಮಕೃಷ್ಣ ಹಾಗೂ ಮಾಲೂರು ತಾಲ್ಲೂಕು ಬನಹಳ್ಳಿ ಗ್ರಾಮದ ಬಿಎಸ್ ರಮೇಶ್ ರವರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರು ಸಲ್ಲಿಸುವ ಅರ್ಜಿಗಳು ಮೇಲ್ಮನವಿಗಳು ಹಾಗೂ ದೂರುಗಳನ್ನು ಆಯೋಗದಲ್ಲಿ ನೊಂದಣಿ ಮಾಡಬಾರದು ಎಂದು ಆಯೋಗದ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ.

ಮಾಹಿತಿ ಆಯೋಗಕ್ಕೆ ಎಂ.ಶಂಕರ್, ಎಂ.ಜಗದೀಶ್, ರಾಮಕೃಷ್ಣ ಹಾಗೂ ಬಿ.ಎಸ್ ರಮೇಶ್ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಆಯೋಗದ ಮುಖ್ಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.
ಮೇಲ್ಮನವಿ ದಾರರು ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳು ಮತ್ತು ಮೇಲ್ಮನವಿಗಳನ್ನು ಪರಿಶೀಲಿಸಿದಾಗ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಂಡು ಬಂದಿಲ್ಲ. ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳಿಗೆ ಉತ್ತರಿಸಲು ಮತ್ತು ಮಾಹಿತಿ ನೀಡಲು ಸರ್ಕಾರಿ ಮಾನವ ಸಂಪನ್ಮೂಲ ವ್ಯಯವಾಗುತ್ತಿದೆ.
ಕೋಲಾರದ ಎಂ.ಶಂಕರ್ ಎಂಬುವವರು ವೃತ್ತಿಯಲ್ಲಿ ಪತ್ರಕರ್ತ ಎಂದು ಹೇಳಿಕೊಂಡು ಸರ್ಕಾರಿ ಕಛೇರಿಗಳಿಂದ ಮಾಹಿತಿ ಕೋರಿ ಅರ್ಜಿ ಸಲ್ಲಿಸುತ್ತಿದ್ದರು. ಮಾಹಿತಿ ನೀಡದೇ ಇರುವಾಗ ಆಯೋಗಕ್ಕೆ ಮೇಲ್ಮನವಿ ಸಲ್ಲಿಸುತ್ತಿದ್ದರು.
ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ಆಯುಕ್ತರು ಶಂಕರ್ ಈಗಾಗಲೇ ಆಯೋಗಕ್ಕೆ ೭೯೨ ಮೇಲ್ಮನವಿ ಹಾಗೂ ದೂರುಗಳನ್ನು ಸಲ್ಲಿಸಿದ್ದಾರೆ. ಆ ಪೈಕಿ ೬೧೩ ಪ್ರಕರಣಗಳು ಇತ್ಯರ್ಥವಾಗಿವೆ. ೧೬೯ ಪ್ರಕರಗಳು ಬಾಕಿ ಉಳಿದಿವೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಮಾಹಿತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗಾಗಿ ಮಾನವ ಸಂಪನ್ಮೂಲಗಳ ಅಧಿಕ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದರಿಂದಾಗಿ ಮಾಹಿತಿ ನೀಡಬೇಕಾದ ಅಧಿಕಾರಿಗಳು ದೈನಂದಿನ ಕೆಲಸಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಾಲೂರು ತಾಲ್ಲೂಕಿನ ಬನಹಳ್ಳಿ ಗ್ರಾಮದ ಬಿ.ಎಸ್ ರಮೇಶ್ ಸಹ ಆಯೋಗಕ್ಕೆ ೬೧೧ ದೂರು ಮತ್ತು ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಈಗಾಗಲೇ ೩೪೯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಆರೋಗದ ಮುಂದೆ ೨೬೨ ಪ್ರಕರಣಗಳು ಬಾಕಿ ಉಳಿದಿವೆ. ಸಾರ್ವಜನಿಕ ಅಧಿಕಾರಿಗಳಿಗೆ ತೊಂದರೆ ನೀಡುವ ದುರುದ್ದೇಶದಿಂದ ಮೇಲ್ಮನವಿ ಸಲ್ಲಿಸಿದ್ದಾರೆ.

ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಜಗದೀಶ್ ಎಂಬುವವರು ಒಟ್ಟು ೧೨೯೪ ಮೇಲ್ಮನವಿ ಮತ್ತು ದೂರುಗಳನ್ನು ಆಯೋಗಕ್ಕೆ ಸಲ್ಲಿಸಿದ್ದರು. ಆ ಪೈಕಿ ೯೧೨ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಒಟ್ಟು ೨೩೧ ಪ್ರಕರಗಳು ಬಾಕಿ ಉಳಿದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಊದವಾರಪಲ್ಲಿ ಗ್ರಾಮದ ವಿ.ರಾಮಕೃಷ್ಣ ಎಂಬುವವರು ಆಯೋಗಕ್ಕೆ ೧೩೧೩ ಮೇಲ್ಮನವಿ ಮತ್ತು ದೂರುಗಳನ್ನು ಸಲ್ಲಿಸಿದ್ದರು. ಆ ಪೈಕಿ ೧೧೦೫ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು ೨೦೮ ಪ್ರಕರಣಗಳು ಬಾಕಿ ಉಳಿದಿವೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಮೇಲ್ಕಂಡ ಎಲ್ಲಾ ಮೇಲ್ಮನವಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಸಾರ್ವಜನಿಕ ಕಛೇರಿಗಳಿಂದ ಮಾಹಿತಿ ನೀಡದಂತೆ ಹಾಗೂ ಆಯೋಗಕ್ಕೆ ಮೇಲ್ಮನವಿಗಳನ್ನು ಸಲ್ಲಿಸದಂತೆ ಆಯೋಗದ ಮುಖ್ಯ ಆಯುಕ್ತರಾದ ಡಾ. ಹೆಚ್.ಸಿ ಸತ್ಯನ್ ಆದೇಶ ಮಾಡಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ವಿವಿಧ ಸಾರ್ವಜನಿಕ ಪ್ರಾಧಿಕಾರಗಳಿಗೆ ನಿರಂತರವಾಗಿ ಮೇಲ್ಮನವಿದಾರರು ಅಸಂಖ್ಯಾತ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಕೇಳುವುದು ರೂಡಿಗತ ಮಾಡಿಕೊಂಡಿದ್ದಾರೆ. ಆ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಅವರು ಸಲ್ಲಿಸುವ ಮೇಲ್ಮನವಿಗಳನ್ನು ವಿಚಾರಣೆ ಮಾಡಲು ಮಾನವ ಸಂಪನ್ಮೂಲಗಳ ಬಳಕೆ ಹಾಗೂ ಸಾರ್ವಜನಿಕ ತೆರಿಗೆ ಹಣ ವ್ಯಯವಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ.
ಗುಜರಾತ್ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಆಯೋಗ ಮೇಲ್ಕಂಡ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಮಾಹಿತಿ ಕೇಳಿ ಸರ್ಕಾರಿ ಅಧಿಕಾರಿಗಳ ಬ್ಲಾಕ್ ಮೇಲ್ ಮಾಡುವ ಆರ್.ಟಿ.ಐ ಕಾರ್ಯಕರ್ತರಿಗೆ ಈ ಆದೇಶ ಎಚ್ಚರಿಕೆಯ ಗಂಟೆಯಾಗಿದೆ.


Leave a Reply