ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಿದೆ. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಹಾಗೂ ವಾಹನ ಮಾಲೀಕರ ವಿರುದ್ಧ ಸಮರ ಸಾರಿರುವ ಪೊಲೀಸರು, ಲಕ್ಷಾಂತರ ರೂಪಾಯಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
2026ರ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಅಂಕಿ-ಅಂಶಗಳ ಪ್ರಕಾರ, ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿದ ಹಾಗೂ ಅವರಿಗೆ ವಾಹನ ನೀಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ 1988ರ ಕಲಂ 199(ಎ) ಅಡಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 131 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಾಗಿದ್ದು, ಅಪ್ರಾಪ್ತ ವಯಸ್ಕರ ಪೋಷಕರು ಮತ್ತು ವಾಹನ ಮಾಲೀಕರಿಗೆ ಮಾನ್ಯ ನ್ಯಾಯಾಲಯವು ಒಟ್ಟು 13,09,000 ರೂ.ಗಳ ಭಾರಿ ದಂಡವನ್ನು ವಿಧಿಸಿದೆ.
ದಾಖಲಾದ ಪ್ರಕರಣಗಳ ಪೈಕಿ ಭಟ್ಕಳ ಶಹರ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 45 ಪ್ರಕರಣಗಳು ದಾಖಲಾಗಿದ್ದು, ಕೇವಲ ಈ ಪ್ರಕರಣಗಳಿಗೆ ನ್ಯಾಯಾಲಯವು ಒಟ್ಟು 5,38,500 ರೂ. ದಂಡ ವಿಧಿಸಿದೆ.
ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಕೇವಲ ಅವರ ಜೀವಕ್ಕೆ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವ ಇತರರ ಸುರಕ್ಷತೆಗೂ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ, ಕಾರು ಅಥವಾ ಇತರೆ ಮೋಟಾರು ವಾಹನಗಳನ್ನು ಚಾಲನೆ ಮಾಡಲು ನೀಡಬಾರದು ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಹನ ಮಾಲೀಕರು ಸಹ ಅಪ್ರಾಪ್ತ ವಯಸ್ಕರಿಗೆ ವಾಹನ ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
“ಅಪ್ರಾಪ್ತರಿಗೆ ವಾಹನ ನೀಡಬೇಡಿ – ಅವರ ಸುರಕ್ಷಿತ ಭವಿಷ್ಯವನ್ನು ಕಾಪಾಡಿ” ಎಂಬ ಸಂದೇಶ ರವಾನಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಮುಂಬರುವ ದಿನಗಳಲ್ಲೂ ಜಿಲ್ಲೆಯಾದ್ಯಂತ ಈ ವಿಶೇಷ ತಪಾಸಣೆ ಹಾಗೂ ಕಾನೂನು ಕ್ರಮ ಮುಂದುವರಿಯಲಿದ್ದು, ಪೋಷಕರು ಹಾಗೂ ವಾಹನ ಮಾಲೀಕರು ರಸ್ತೆ ಸುರಕ್ಷತೆಗೆ ಸಹಕರಿಸುವಂತೆ ಮನವಿ ಮಾಡಿದೆ.
