ಅಂಕೋಲಾ: ದುಷ್ಕರ್ಮಿಗಳ ಭೀಕರ ಹಲ್ಲೆಗೆ ಒಳಗಾಗಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರು ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದ ನಂತರ ತಾಲೂಕಿಗೆ ಮರಳುತ್ತಿದ್ದು ಘಟನೆಯ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದರು.

ಅಂಕೋಲೆಗೆ ಆಗಮಿಸುತ್ತಿದ್ದಂತೆಯೇ ನೇರವಾಗಿ ಪಟ್ಟಣದ ಪ್ರಸಿದ್ಧ ವೆಂಕಟರಮಣ ದೇವಸ್ಥಾನ ಹಾಗೂ ಕಣಕಣೇಶ್ವರ ದೇವಸ್ಥಾನಕ್ಕೆ ತೆರಳಿದ ಗೋಪಾಲಕೃಷ್ಣ ನಾಯಕ್, ವಿಶೇಷ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸಲಿದ್ದಾರೆ ಎನ್ನಲಾಗಿದೆ. ಹಲ್ಲೆಯ ಸಂದರ್ಭದಲ್ಲಿ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದ ಹಿನ್ನೆಲೆಯಲ್ಲಿ ದೇವರಿಗೆ ನಮನ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಹುಮ್ಮಸ್ಸಿನಿಂದ ಕೂಡಿದ ಮೊದಲ ಪ್ರತಿಕ್ರಿಯೆ
ಡಿಸ್ಚಾರ್ಜ್ ಆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮೇಲಾದ ಹಲ್ಲೆಯಿಂದ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಧೈರ್ಯ ತುಂಬಿದರು.

”ನನ್ನ ಮೇಲೆ ನಡೆದ ಹಲ್ಲೆಯಿಂದ ನೀವೆಲ್ಲರೂ ಬಹಳ ಆತಂಕಕ್ಕೊಳಗಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಯಿಂದ ನಾನು ಈಗ ಗುಣಮುಖನಾಗಿದ್ದೇನೆ. ದಯವಿಟ್ಟು ನನ್ನನ್ನು ನೋಡಲು ಯಾರೂ ಆಸ್ಪತ್ರೆಗೆ ಅಥವಾ ಮನೆಗೆ ಬಂದು ಶ್ರಮಪಡಬೇಡಿ. ನಿಮ್ಮ ಸೇವೆ ಮಾಡಲು ನಾನು ಈಗ ಮತ್ತಷ್ಟು ಉತ್ಸುಕನಾಗಿದ್ದೇನೆ. ಈ ಘಟನೆ ನನ್ನನ್ನು ಕುಗ್ಗಿಸಿಲ್ಲ, ಬದಲಾಗಿ ಇನ್ನು ಹೆಚ್ಚಿನ ಹುಮ್ಮಸ್ಸಿನಿಂದ ನಿಮ್ಮ ಸೇವೆಗೆ ಸಿದ್ಧನಾಗಿದ್ದೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ದುಷ್ಕರ್ಮಿಗಳ ತಂಡವೊಂದು ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ತಲೆ ಮತ್ತು ಕುತ್ತಿಗೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನ ಹಾಗೂ ಜನರ ಹಾರೈಕೆಯ ಫಲವಾಗಿ ಅವರು ಚೇತರಿಸಿಕೊಂಡಿದ್ದಾರೆ. ನಾಯಕ್ ಅವರ ಈ ಮಾತುಗಳು ಅವರ ಬೆಂಬಲಿಗರಲ್ಲಿ ಹೊಸ ಚೈತನ್ಯ ತುಂಬಿದೆ.


