ಕಾರವಾರ: ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಕೇಂದ್ರ ಸರ್ಕಾರದ ‘ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್’ (CEIR) ಪೋರ್ಟಲ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಇದರ ನೆರವಿನಿಂದ ಕೇವಲ ಆರು ತಿಂಗಳ ಅವಧಿಯಲ್ಲಿ ಬರೋಬ್ಬರಿ 157 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ, ಅವುಗಳ ಮೂಲ ಮಾಲೀಕರಿಗೆ ಒಪ್ಪಿಸುವಲ್ಲಿ ಇಲಾಖೆ ಭರ್ಜರಿ ಯಶಸ್ಸು ಕಂಡಿದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದುಹೋದ ಮೊಬೈಲ್‌ಗಳನ್ನು ಹುಡುಕಲು 2025 ರ ಅಕ್ಟೋಬರ್ 1 ರಿಂದ ವಿಶೇಷ ಕಾರ್ಯಾಚರಣೆಯನ್ನು (ಡ್ರೈವ್) ಹಮ್ಮಿಕೊಳ್ಳಲಾಗಿತ್ತು. ಕಳೆದ ಆರು ತಿಂಗಳಲ್ಲಿ ವರದಿಯಾದ ಒಟ್ಟು 682 ಮೊಬೈಲ್ ಮಿಸ್ಸಿಂಗ್ ಪ್ರಕರಣಗಳ ಪೈಕಿ 157 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ.
ಉಳಿದ 525 ಮೊಬೈಲ್‌ಗಳ ಪತ್ತೆ ಕಾರ್ಯವು ಭರದಿಂದ ಸಾಗುತ್ತಿದೆ. ಈ ಅತ್ಯುತ್ತಮ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಇಲಾಖೆಯು ಮುಕ್ತಕಂಠದಿಂದ ಪ್ರಶಂಸಿಸಿದೆ.
`ನುಡಿಜೇನು ದಿನಪತ್ರಿಕೆ’ ಶನಿವಾರ(11)ದ ಪ್ರಮುಖ ಸುದ್ದಿಗಳು
CEIR ಪೋರ್ಟಲ್ ತಂತ್ರಜ್ಞಾನದ ಮೂಲಕ ಕಳೆದುಹೋದ ಮೊಬೈಲ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡುವುದರೊಂದಿಗೆ, ಆ ಮೊಬೈಲ್ ಅನ್ನು ದೇಶದಾದ್ಯಂತ ಎಲ್ಲೇ ಇದ್ದರೂ ಸುಲಭವಾಗಿ ಟ್ರ್ಯಾಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಹೀಗಾಗಿ, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ತಕ್ಷಣವೇ ಯಾವುದೇ ವಿಳಂಬ ಮಾಡದೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಜೊತೆಗೆ, CEIR ಪೋರ್ಟಲ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೊಂದಾಯಿಸುವುದರಿಂದ ಆ ಮೊಬೈಲನ್ನು ಬೇರೆಯವರು ಬಳಸಲು ಸಾಧ್ಯವಾಗದಂತೆ ತಡೆಯಬಹುದು ಮತ್ತು ತ್ವರಿತವಾಗಿ ಪತ್ತೆಹಚ್ಚಬಹುದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಜಿಲ್ಲೆಯಾದ್ಯಂತ ಒಟ್ಟು 23 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ಕುಮಟಾ ಠಾಣಾ ವ್ಯಾಪ್ತಿಯಲ್ಲಿ 20, ದಾಂಡೇಲಿ ನಗರದಲ್ಲಿ 17, ಭಟ್ಕಳ ನಗರದಲ್ಲಿ 15, ಬನವಾಸಿಯಲ್ಲಿ 15 ಹಾಗೂ ಶಿರಸಿ ಹೊಸ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 12 ಮೊಬೈಲ್‌ಗಳು ಪತ್ತೆಯಾಗಿವೆ.
ಉಳಿದಂತೆ ಕಾರವಾರ ನಗರ ಠಾಣೆ ವ್ಯಾಪ್ತಿಯಲ್ಲಿ 10, ಮುರ್ಡೇಶ್ವರದಲ್ಲಿ 08, ಅಂಕೋಲಾದಲ್ಲಿ 07 ಹಾಗೂ ಜೋಯಿಡಾ ಠಾಣಾ ವ್ಯಾಪ್ತಿಯಲ್ಲಿ 07 ಮೊಬೈಲ್‌ಗಳನ್ನು ಪತ್ತೆಹಚ್ಚುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
