ಕಾರವಾರ: ತಾಲೂಕಿನ ಹೋಟೆಗಾಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಭಾರೀ ಪ್ರಮಾಣದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಭೇದಿಸಿ, ಜಪ್ತಿ ಮಾಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪಾಯುಕ್ತರ ಮಾರ್ಗದರ್ಶನದಲ್ಲಿ ಶನಿವಾರ (ನವೆಂಬರ್ 14) ಈ ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಹೋಟೆಗಾಳಿ ಗ್ರಾಮದ ನಿವಾಸಿ ವಿಜಯ ಪಡುವಳಕರ ಎಂಬುವರಿಗೆ ಸೇರಿದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳ ತಂಡ ದಿಢೀರ್ ಶೋಧ ನಡೆಸಿದೆ.
ಭಾರೀ ಪ್ರಮಾಣದ ಮದ್ಯ ವಶ:
ಮನೆಯನ್ನು ತಪಾಸಣೆ ನಡೆಸಿದಾಗ ಅಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಒಟ್ಟು 34.500 ಲೀಟರ್ ಗೋವಾ ಮದ್ಯ ಹಾಗೂ 65.000 ಲೀಟರ್ ಗೋವಾ ಬಿಯರ್ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಈ ಮದ್ಯದ ಒಟ್ಟು ಮೌಲ್ಯ 42,500 ರೂಪಾಯಿಗಳಾಗಿವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪರಾರಿಯಾದ ಆರೋಪಿ:
ಅಬಕಾರಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಆರೋಪಿ ವಿಜಯ ಪಡುವಳಕರ ಮನೆಯಲ್ಲಿರದೆ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಬಗ್ಗೆ ಅಬಕಾರಿ ನಿರೀಕ್ಷಕಿ ಸುನೀತಾ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕರ ಸೂಚನೆಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಶಿವಶಂಕರ ಯು., ಪೇದೆ ನವೀನ್ ನಾಯಕ್ ಬಿ. ಹಾಗೂ ವಾಹನ ಚಾಲಕ ಬಾಲಚಂದ್ರ ಅವರು ಸಹಕರಿಸಿದ್ದರು.
