ಕಾರವಾರ: ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ-1 (KGS-1) ಮತ್ತೆ ಕಾರ್ಯಾರಂಭದ ಹಂತಕ್ಕೆ ತಲುಪಿದ್ದು, ನವೆಂಬರ್ 22ರ ಮುಂಜಾನೆ ಯಶಸ್ವಿಯಾಗಿ ‘ಕ್ರಿಟಿಕಾಲಿಟಿ’ ಹಂತವನ್ನು ಸಾಧಿಸಿದೆ. ಅಂದರೆ, ಅಣು ರಿಯಾಕ್ಟರ್ನಲ್ಲಿ ನಿಯಂತ್ರಿತ ಮತ್ತು ನಿರಂತರ ಅಣು ವಿದಳನ ಸರಪಳಿ ಕ್ರಿಯೆ (Controlled and sustained nuclear fission chain reaction) ಅಧಿಕೃತವಾಗಿ ಆರಂಭಗೊಂಡಿದೆ ಎಂದು ಭಾರತೀಯ ಅಣು ವಿದ್ಯುತ್ ನಿಗಮ (ಎನ್.ಪಿ.ಸಿ.ಐ.ಎಲ್) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
600 ದಿನಗಳಲ್ಲಿ ನವೀಕರಣ ಪೂರ್ಣ: ಎನ್ಪಿಸಿಐಎಲ್ನ ಮೊದಲ ರಿಯಾಕ್ಟರ್
2025ರ ಏಪ್ರಿಲ್ 1 ರಂದು ಇ.ಎಂ.ಸಿ.ಸಿ.ಆರ್ (EMCCR) ಮತ್ತು ಇ.ಎಂ.ಎಫ್.ಆರ್ (EMFR) ಸೇರಿದಂತೆ ಪ್ರಮುಖ ಪುನರುಜ್ಜೀವನ ಹಾಗೂ ನವೀಕರಣ ಕಾಮಗಾರಿಗಳಿಗಾಗಿ ಈ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೇವಲ 600 ದಿನಗಳಲ್ಲಿ ಎಲ್ಲಾ ತಾಂತ್ರಿಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕ್ರಿಟಿಕಾಲಿಟಿ ಸಾಧಿಸಿರುವುದು ವಿಶೇಷವಾಗಿದೆ. ಈ ಮೂಲಕ ಇಷ್ಟು ಕಡಿಮೆ ಅವಧಿಯಲ್ಲಿ ಕ್ರಿಟಿಕಾಲಿಟಿ ತಲುಪಿದ ಎನ್.ಪಿ.ಸಿ.ಐ.ಎಲ್ನ ಮೊದಲ ರಿಯಾಕ್ಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೈಗಾ ಘಟಕ-1 ಪಾತ್ರವಾಗಿದೆ ಎಂದು ಸಂಸ್ಥೆ ಹೆಮ್ಮೆಯಿಂದ ತಿಳಿಸಿದೆ.

ಸಿಬ್ಬಂದಿಯ ತಾಂತ್ರಿಕ ಪರಿಣಿತಿಗೆ ಎನ್ಪಿಸಿಐಎಲ್ ಮೆಚ್ಚುಗೆ
ಈ ಮಹತ್ವದ ಸಾಧನೆಯು ಕೈಗಾ ಘಟಕದ ಸಿಬ್ಬಂದಿಯ ಅಪಾರ ಪರಿಶ್ರಮ, ತಾಂತ್ರಿಕ ಪರಿಣಿತಿ, ಬದ್ಧತೆ ಹಾಗೂ ಸಂಘಟಿತ ತಂಡದ ಕಾರ್ಯನಿರ್ವಹಣೆಗೆ ಹಿಡಿದ ಕನ್ನಡಿಯಾಗಿದೆ. ಈ ಯಶಸ್ಸಿಗಾಗಿ ಕೈಗಾ ತಂಡ, ಎನ್.ಪಿ.ಸಿ.ಐ.ಎಲ್ ಕುಟುಂಬ ಹಾಗೂ ಅಣುಶಕ್ತಿ ಇಲಾಖೆಯ ಸಮಸ್ತ ಸಿಬ್ಬಂದಿಗೆ ಸಂಸ್ಥೆಯು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
