ಅಂಕೋಲಾ: ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗ್ರಾಮದ ಮನೆಯೊಂದರೊಳಗೆ ಸುಮಾರು 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಅವಿತುಕೊಂಡಿತ್ತು. ಮನೆಯೊಳಗೆ ಇಷ್ಟೊಂದು ದೊಡ್ಡ ಗಾತ್ರದ ಹಾವನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಈ ಬಗ್ಗೆ ಉರಗ ಪ್ರೇಮಿಗಳ ತಂಡಕ್ಕೆ ಮಾಹಿತಿಯನ್ನು ಮುಟ್ಟಿಸಿದ್ದಾರೆ.
ಗ್ರಾಮಸ್ಥರಿಂದ ಮಾಹಿತಿ ತಿಳಿದ ತಕ್ಷಣವೇ ಉರಗ ತಜ್ಞರ ತಂಡದ ಪ್ರಮುಖ ಸದಸ್ಯರಾದ ಸೂರಜ್ ಶೆಟ್ಟಿ ಅರಬೈಲ್ ಹಾಗೂ ಹರೀಶ್ ಮಡಿವಾಳ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆಗಿಳಿದ ಈ ತಂಡ, ಮನೆಯೊಳಗೆ ಸೇರಿಕೊಂಡಿದ್ದ ಆ ಬೃಹತ್ ಕಾಳಿಂಗ ಸರ್ಪವನ್ನು ಯಾರಿಗೂ ಹಾಗೂ ಹಾವಿಗೂ ಯಾವುದೇ ಹಾನಿಯಾಗದಂತೆ ಅತ್ಯಂತ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸೆರೆಹಿಡಿದ ಬಳಿಕ 16 ಅಡಿಯ ಕಾಳಿಂಗ ಸರ್ಪವನ್ನು ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಒಯ್ದು ಸುರಕ್ಷಿತವಾಗಿ ಬಿಡಲಾಗಿದೆ. ಮನೆಯೊಳಗೆ ಕಾಳಿಂಗ ಸರ್ಪ ಸೇರಿಕೊಂಡಿದ್ದ ವಿಷಯ ತಿಳಿದು ಕೆಲಕಾಲ ಇಡೀ ಗ್ರಾಮದಲ್ಲೇ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಉರಗ ತಜ್ಞರ ಯಶಸ್ವಿ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ರಕ್ಷಣಾ ತಂಡದ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
