ಸಿದ್ದಾಪುರ: ಕೆಲಸದಿಂದ ತೆಗೆದುಹಾಕಿದ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯವು 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸಿದ್ದಾಪುರ ತಾಲೂಕಿನ ಆಡುಕಟ್ಟೆ ಮೂಲದ ವೀರಭದ್ರ ತಿಮ್ಮಾ ನಾಯ್ಕ ಶಿಕ್ಷೆಗೊಳಗಾದ ಅಪರಾಧಿ.
30-04-2025 ರಂದು ಈ ಕೃತ್ಯ ನಡೆದಿತ್ತು. ತನ್ನನ್ನು ಕೆಲಸದಿಂದ ತೆಗೆದುಹಾಕಿದ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಆರೋಪಿ ವೀರಭದ್ರ, ಫಿರ್ಯಾದಿಯು ಆಡುಕಟ್ಟೆಯ ಪಶು ಚಿಕಿತ್ಸಾಲಯದ ಎದುರಿನ ರಸ್ತೆಯಲ್ಲಿ ಬರುತ್ತಿದ್ದಾಗ ಮಾರ್ಗಮಧ್ಯೆ ಅಡ್ಡಗಟ್ಟಿದ್ದನು. ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆತ, ಬಳಿಕ ತನ್ನ ಬಳಿಯಿದ್ದ ಕತ್ತಿ ಮತ್ತು ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದನು. ಕೊಲೆ ಮಾಡುವ ಉದ್ದೇಶದಿಂದಲೇ ಈ ಭೀಕರ ಕೃತ್ಯ ಎಸಗಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಸುಭಾಶ್ ಬಿಳಿಯ ನಾಯಕ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು. ಈ ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರಾದ ರಾಜೇಶ್ ಎಂ. ಮಳಗಿಕರ್ ಅವರು, ನ್ಯಾಯಾಲಯದಲ್ಲಿ ಅತ್ಯಂತ ಸಮರ್ಥವಾಗಿ ಸಾಕ್ಷ್ಯಾಧಾರಗಳ ಸಮೇತ ತಮ್ಮ ವಾದ ಮಂಡಿಸಿದ್ದರು.
ಸರ್ಕಾರಿ ವಕೀಲರ ವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು, ಆರೋಪಿ ವೀರಭದ್ರನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ.
