ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರು ಹಾಗೂ ನಾಲ್ಕು ವರ್ಷದ ಮಗುವನ್ನು ನಡುಕಾಡಿನಲ್ಲಿ ಇಳಿಸಿ ಅಮಾನವೀಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಈ ದರ್ಪದ ವರ್ತನೆ ಕುರಿತು ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿಲ್ದಾಣದಿಂದ ದೂರ ಬಸ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ?
ದೇವಿಮನೆಯ ನಿವಾಸಿ ಪ್ರೇಮಾ ಸುರೇಶ್ ಭಂಡಾರಿ ಎಂಬುವವರು ಈ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೂನ್ 07, 2026 ರಂದು ಮಧ್ಯಾಹ್ನ 2:30 ರ ಸುಮಾರಿಗೆ ತಮ್ಮ ಮಗಳು ಹಾಗೂ ನಾಲ್ಕು ವರ್ಷದ ಮೊಮ್ಮಗನೊಂದಿಗೆ ಶಿರಸಿಗೆ ತೆರಳಲು ಅವರು ದೇವಿಮನೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಬಂದ ಕುಮಟಾ-ಶಿರಸಿ ಮಾರ್ಗದ ಬಸ್ಸಿಗೆ ಕೈಮಾಡಿದಾಗ, ಕುಮಟಾ ಡಿಪೋದ ಚಾಲಕ ಕಿರಣ್ ನಾಯ್ಕ್ ನಿಲ್ದಾಣದಿಂದ ಸುಮಾರು ದೂರದಲ್ಲಿ ಬಸ್ ನಿಲ್ಲಿಸಿದ್ದಾನೆ. ಮಗುವನ್ನು ಎತ್ತಿಕೊಂಡು ಓಡಿಬಂದು ಬಸ್ ಹತ್ತುವಾಗ, “ಬೇಗ ಬರಲು ಆಗುವುದಿಲ್ಲವೇ” ಎಂದು ಚಾಲಕ ರೇಗಿದ್ದಾನೆ. ಬಸ್ಸನ್ನು ದೂರ ನಿಲ್ಲಿಸಿ ಈ ರೀತಿ ರೇಗುವುದು ಸರಿಯೇ ಎಂದು ಮಹಿಳೆ ಪ್ರಶ್ನಿಸಿದಾಗ ಆತ ಮತ್ತಷ್ಟು ಆಕ್ರೋಶಗೊಂಡಿದ್ದಾನೆ.
ಕಾಡಿನ ಮಧ್ಯೆ ಇಳಿಸಿ ಚಾಲಕನ ದರ್ಪ
ಮಹಿಳೆಯ ಪ್ರಶ್ನೆಯಿಂದ ಕೆರಳಿದ ಚಾಲಕ, “ನಿನ್ನ ಮನೆ ಬಾಗಿಲಲ್ಲಿ ಬಸ್ಸು ನಿಲ್ಲಿಸಬೇಕಾ” ಎಂದು ಏರುಧ್ವನಿಯಲ್ಲಿ ಗದರಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ, ದೇವಿಮನೆ ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಬಸ್ ನಿಲ್ಲಿಸಿದ್ದಾನೆ. ಜೊತೆಯಲ್ಲಿ ಚಿಕ್ಕ ಮಗು ಇದೆ ಎಂಬುದನ್ನೂ ಲೆಕ್ಕಿಸದೆ, ಈಗಲೇ ಇಳಿಯುವಂತೆ ಧಮ್ಕಿ ಹಾಕಿ, “ಯಾರಿಗೆ ಬೇಕಾದರೂ ದೂರು ಕೊಡಿ, ನನ್ನನ್ನು ಏನು ಮಾಡಲೂ ಆಗುವುದಿಲ್ಲ” ಎಂದು ಸವಾಲು ಹಾಕಿ ಮೂವರನ್ನೂ ಕಾಡಿನಲ್ಲೇ ಇಳಿಸಿ ಹೋಗಿದ್ದಾನೆ.
ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ
ಈ ಅಮಾನವೀಯ ಘಟನೆಯಿಂದ ತೀವ್ರ ಮಾನಸಿಕ ಕಿರುಕುಳ ಹಾಗೂ ಅವಮಾನ ಅನುಭವಿಸಿರುವ ಪ್ರೇಮಾ ಭಂಡಾರಿ ಅವರು, ಜೂನ್ 08 ರಂದು ಕುಮಟಾ ಡಿಪೋ ಘಟಕ ವ್ಯವಸ್ಥಾಪಕರಿಗೆ ದೂರು ನೀಡಿದ್ದಾರೆ. ಇದರ ಪ್ರತಿಯನ್ನು ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಹಾಗೂ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ರವಾನಿಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಆದರೆ, ದೂರು ನೀಡಿ ದಿನಗಳು ಕಳೆದರೂ ಅಧಿಕಾರಿಗಳು ಇಲ್ಲಿಯವರೆಗೆ ಚಾಲಕನ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಈ ಚಾಲಕ ಈ ಹಿಂದೆಯೂ ಹಲವು ಬಾರಿ ಪ್ರಯಾಣಿಕರೊಂದಿಗೆ ಇದೇ ರೀತಿ ದುರ್ವರ್ತನೆ ತೋರಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣವೇ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ರಸ್ತೆಯಲ್ಲಿ ಬಸ್ ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಸಾರಿಗೆ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.
