Spread the love

ಶಿರಸಿ: ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಿರುವ ಪೊಲೀಸರು, ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ ಕಂಬಿ ಹಿಂದಕ್ಕೆ ತಳ್ಳಿದ್ದಾರೆ. ಸಿದ್ದಾಪುರ ತಾಲೂಕಿನ ಹೆರೂರು ನಿವಾಸಿ, ಕೂಲಿ ಕೆಲಸ ಮಾಡುವ 21 ವರ್ಷದ ಅಬ್ದುಲ್ ಖುದ್ದುಸ್ ಅಬ್ದುಲ್ ಗನಿ ಬಂಧಿತ ಆರೋಪಿಯಾಗಿದ್ದು, ಈತನಿಂದ ಕಳುವಾಗಿದ್ದ ಚಿನ್ನಾಭರಣಗಳು, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ದಿನಾಂಕ 18-04-2026 ರಂದು ರಾತ್ರಿ 19-30 ಗಂಟೆಯಿಂದ ದಿನಾಂಕ 19-04-2026 ರಂದು ಬೆಳಿಗ್ಗೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆಯ ಮುಂಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ಒಳನುಗ್ಗಿದ್ದ ಆರೋಪಿ, ನಂತರ ಟ್ರೇಜರಿ ಬಾಗಿಲನ್ನೂ ಒಡೆದು 1,00,000 ರೂ. ನಗದು ಹಾಗೂ ಅಂದಾಜು 1,30,000 ರೂ. ಮೌಲ್ಯದ 08 ಗ್ರಾಂ ತೂಕದ 02 ಬಂಗಾರದ ಉಂಗುರಗಳನ್ನು ದೋಚಿದ್ದ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಕಲಂ 331(3), 331(4) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆರೋಪಿ ಅಬ್ದುಲ್ ಖುದ್ದುಸ್‌ನ ಜಾಡು ಹಿಡಿದು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆತ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ 10,430 ರೂ. ನಗದು ಹಣ, 1,30,000 ರೂ. ಮೌಲ್ಯದ 08 ಗ್ರಾಂ ತೂಕದ 02 ಬಂಗಾರದ ಉಂಗುರಗಳು, ಕೃತ್ಯಕ್ಕೆ ಬಳಸಿದ್ದ ಮಚ್ಚು, ಸ್ಕ್ಯಾನರ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಕನಶೆಟ್ಟಿ ಅವರ ನೇತೃತ್ವದಲ್ಲಿ ಎಎಸ್‌ಐ ಮಂಗಳಮೂರ್ತಿ ಶಿರಹಟ್ಟಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಸಂತೋಷ್ ಆರ್.ಕೆ, ಸಂದೀಪ್ ನಿಂಬಾಯಿ, ರಾಕೇಶ್ ಎನ್.ಹೆಚ್, ಅರುಣ್ ಲಮಾಣಿ, ಮಂಜುನಾಥ್ ಕೆ., ಪ್ರಸಾದ್ ಎಂ., ಮಲ್ಲಿಕಾರ್ಜುನ ಕೆ., ಜೀಪ್ ಚಾಲಕ ಹನುಮಂತ ವಾಲಿಕರ್, ಹಾಗೂ ಕಾರವಾರ ಟೆಕ್ನಿಕಲ್ ಸೆಲ್ ಸಿಬ್ಬಂದಿ ಉದಯ ಗುನಗಾ ಮತ್ತು ಬಬನ್ ಕದಂ ಅವರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *