Spread the love

ಭಟ್ಕಳ: ತಾಲೂಕಿನ ಮೂಡ ಶಿರಾಲಿ, ಬೆಂಗ್ರೆ ಬಳಿ ಮೇಯಲು ಬಿಟ್ಟಿದ್ದ ದನಗಳನ್ನು ಮರಳಿ ತರಲು ರೈಲು ಹಳಿ ದಾಟುತ್ತಿದ್ದ 62 ವರ್ಷದ ವೃದ್ಧೆಯೊಬ್ಬರಿಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ (ಏಪ್ರಿಲ್ 23) ರಾತ್ರಿ ಸಂಭವಿಸಿದೆ. ಮೃತ ದುರ್ದೈವಿಯನ್ನು ಮೂಡ ಶಿರಾಲಿ, ಬೆಂಗ್ರೆ-02 ನಿವಾಸಿ ಮಾಸ್ತಮ್ಮ ತಿಮ್ಮಯ್ಯ ನಾಯ್ಕ (62) ಎಂದು ಗುರುತಿಸಲಾಗಿದೆ.

ಮಾಸ್ತಮ್ಮ ಅವರಿಗೆ ಕಳೆದ 2-3 ವರ್ಷಗಳಿಂದ ಕಿವಿಯ ಕೇಳುವಿಕೆಯಲ್ಲಿ ದೋಷವಿತ್ತು. ಅವರು ಪ್ರತಿದಿನ ಬೆಳಿಗ್ಗೆ 7:00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಸಾಕಿದ ದನಗಳನ್ನು ಮೇಯಲು ಬಿಡುತ್ತಿದ್ದರು. ನಂತರ ಸಂಜೆ 7:30 ರಿಂದ 8:00 ಗಂಟೆಯ ಸಮಯದಲ್ಲಿ ದನಗಳನ್ನು ಹುಡುಕಿಕೊಂಡು ಮರಳಿ ಮನೆಗೆ ಕರೆತರುತ್ತಿದ್ದರು. ಏಪ್ರಿಲ್ 23 ರಂದು ಕೂಡ ಎಂದಿನಂತೆ ಬೆಳಿಗ್ಗೆ ದನಗಳನ್ನು ಮೇಯಲು ಬಿಟ್ಟಿದ್ದ ಅವರು, ಸಂಜೆ 7:30 ರಿಂದ 8:00 ಗಂಟೆಯ ನಡುವೆ ದನಗಳನ್ನು ಕರೆತರಲು ರೈಲು ಹಳಿ ದಾಟುತ್ತಿದ್ದರು. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ವೇಗವಾಗಿ ಚಲಿಸುತ್ತಿದ್ದ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮಾಸ್ತಮ್ಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಿವಿಯ ದೋಷವಿದ್ದ ಕಾರಣ ರೈಲು ಬರುವ ಶಬ್ದ ಅವರಿಗೆ ಕೇಳಿಸದೆ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಮೃತರ ಪುತ್ರ ಮಂಜುನಾಥ ತಿಮ್ಮಯ್ಯ ನಾಯ್ಕ (42) ಅವರು ಏಪ್ರಿಲ್ 24 ರಂದು ಮಧ್ಯರಾತ್ರಿ 00:30 ಗಂಟೆಗೆ ಭಟ್ಕಳ ಆಸ್ಪತ್ರೆಯಲ್ಲಿ ದೂರು ನೀಡಿದ್ದು, ತಮ್ಮ ತಾಯಿಯ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕಲಂ 194 ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *