ಭಟ್ಕಳ: ತಾಲ್ಲೂಕಿನಲ್ಲಿ ಜಾನುವಾರುಗಳ ಮೇಲೆ ಕ್ರೂರತೆ ಎಸಗಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಗೂ ವಧೆಗೆ ಸಿದ್ಧಪಡಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿರುವ ಭಟ್ಕಳ ಪೊಲೀಸರು, ಬರೋಬ್ಬರಿ 8 ಒಂಟೆಗಳು ಹಾಗೂ 2 ಎತ್ತುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ.21 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮೊದಲ ಪ್ರಕರಣ ದಾಖಲಾಗಿದೆ. ಶಿರಾಲಿ ಕಡೆಯಿಂದ ಉಳ್ಳಾಲದತ್ತ ಸಾಗುತ್ತಿದ್ದ ಮಹಾರಾಷ್ಟ್ರ ನೋಂದಣಿಯ MH-09/HD-5448 ಸಂಖ್ಯೆಯ ಎಸ್.ಎಮ್.ಎಲ್ ಸಾಮ್ರಾಟ್ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಲಾರಿಯ ಹಿಂಭಾಗದಲ್ಲಿ ಸುಮಾರು 3.75 ಲಕ್ಷ ರೂಪಾಯಿ ಮೌಲ್ಯದ 8 ಒಂಟೆಗಳನ್ನು ಅತ್ಯಂತ ಅಮಾನುಷವಾಗಿ ಕಟ್ಟಲಾಗಿತ್ತು.
ಯಾವುದೇ ಮೇವು ಹಾಗೂ ನೀರಿನ ವ್ಯವಸ್ಥೆ ಇಲ್ಲದೆ, ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆಯನ್ನೂ ಹೊಂದದೆ ಈ ಮೂಕ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ಮಧ್ಯಪ್ರದೇಶ ಮೂಲದ 26 ವರ್ಷದ ಕರಣ ಬಾಬರ, ಮಹಾರಾಷ್ಟ್ರದ 22 ವರ್ಷದ ಸುಹಾಸ ಸೂರ್ಯವಂಶಿ ಹಾಗೂ 19 ವರ್ಷದ ಯಶ ಗೋಟಕಿಂಡೆ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣವು ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂದರ ರೋಡ್ ಪ್ರದೇಶದಲ್ಲಿ ವರದಿಯಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು 20-04-2026 ರಂದು ರಾತ್ರಿ 9:45 ಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 2 ಎತ್ತುಗಳನ್ನು ನೀರು, ಮೇವು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ 42 ವರ್ಷದ ಮೊಹಮ್ಮದ್ ಶಿಯಾಮ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎತ್ತುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ Prevention of Cruelty to Animals Act-1960 ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಜಾನುವಾರುಗಳ ಮೇಲಿನ ಕ್ರೌರ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
