ಮುಂಡಗೋಡ: ಪಟ್ಟಣದಲ್ಲಿ ನಡುರಾತ್ರಿಯ ವೇಳೆ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ತಂಡವೊಂದು ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಎಂಎನ್ಡಿ (MND) ಅಲಿಯಾಸ್ ಜಮೀರ್ ಅಹ್ಮದ್ ದರ್ಗಾವಾಲೆ ಬರ್ಬರವಾಗಿ ಕೊಲೆಯಾದ ವ್ಯಕ್ತಿ.
ಮುಂಡಗೋಡ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಂಬಿಕಾ ಹೋಟೆಲ್ನಲ್ಲಿ ಈ ಘಟನೆ ಸಂಭವಿಸಿದೆ. ನಡುರಾತ್ರಿ ಏಕಾಏಕಿ ಹೋಟೆಲ್ಗೆ ನುಗ್ಗಿದ ದುಷ್ಕರ್ಮಿಗಳು, ಜಮೀರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಜಮೀರ್ ಅಹ್ಮದ್ ದರ್ಗಾವಾಲೆ, ಆ ಭಾಗದಲ್ಲಿ ಅಕ್ರಮ ‘ಮೀಟರ್ ಬಡ್ಡಿ’ ದಂಧೆಯ ಕಿಂಗ್ಪಿನ್ ಆಗಿ ಗುರುತಿಸಿಕೊಂಡಿದ್ದನು.
ಒಂದು ವರ್ಷದ ಹಿಂದೆ ಕಿಡ್ನಾಪ್ ಆಗಿದ್ದ ಜಮೀರ್!
ಹಣಕಾಸಿನ ವಿಚಾರವಾಗಿ ಜಮೀರ್ ಸಾಕಷ್ಟು ಶತ್ರುಗಳನ್ನು ಕಟ್ಟಿಕೊಂಡಿದ್ದ ಎನ್ನಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಇದೇ ಜಮೀರ್ನನ್ನು ದುಷ್ಕರ್ಮಿಗಳ ತಂಡವೊಂದು ಕಿಡ್ನಾಪ್ ಮಾಡಿ, ಬಿಡುಗಡೆ ಮಾಡಲು ಬಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಮಯದಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಆತನ ಭೀಕರ ಹತ್ಯೆಯಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೇ ಅಥವಾ ಮೀಟರ್ ಬಡ್ಡಿ ವ್ಯವಹಾರದ ವೈಷಮ್ಯವೇ ಈ ಕೃತ್ಯಕ್ಕೆ ಕಾರಣವೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣವೇ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಜಾಲಬೀಸಿದ್ದಾರೆ. ಮೀಟರ್ ಬಡ್ಡಿ ದಂಧೆಕೋರನ ಹತ್ಯೆಯಿಂದ ಮುಂಡಗೋಡ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ.
