Spread the love

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿದ್ದ ಮೀಟರ್ ಬಡ್ಡಿ ದಂಧೆಕೋರ, ವ್ಯಾಪಾರಿಯ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ನಡೆದ ಕೇವಲ 24 ಗಂಟೆಯೊಳಗೆ ತ್ವರಿತ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ತಂಡವು, ಐವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿದೆ. ಆರೋಪಿಗಳಿಂದ ನಾಡಪಿಸ್ತೂಲ್, ಸಜೀವ ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಏಪ್ರಿಲ್ 24 ರಂದು ರಾತ್ರಿ 11:00 ರಿಂದ 11:15ರ ಸುಮಾರಿಗೆ ಮುಂಡಗೋಡದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿರುವ ‘ಅಂಬಿಕಾ ಸಾವಜಿ ಹೋಟೆಲ್’ನಲ್ಲಿ ಈ ಭೀಕರ ಹತ್ಯೆ ನಡೆದಿತ್ತು. ಮುಂಡಗೋಡದ ನೂರಾನಿಗಲ್ಲಿ ನಿವಾಸಿ, ವ್ಯಾಪಾರಿ ಜಮೀರ್ ಅಹ್ಮದ್ ನಜೀರ್ ಅಹ್ಮದ್ ದರ್ಗಾವಾಲೆ (38) ಎಂಬುವವರ ಕಣ್ಣಿಗೆ ಏಕಾಏಕಿ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಹರಿತವಾದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.

ಯಾವುದೋ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿತ್ತು ಎನ್ನಲಾಗಿದೆ. ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಗಳ ಪತ್ತೆಗಾಗಿ ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿದ್ದರು. ತಾಂತ್ರಿಕ ವಿಶ್ಲೇಷಣೆ ಹಾಗೂ ಸ್ಥಳೀಯ ಗುಪ್ತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು, ಪರಾರಿಯಾಗುತ್ತಿದ್ದ ಆರೋಪಿಗಳನ್ನು ನೆಲಮಂಗಲದ ಬಳಿ ಅಡ್ಡಗಟ್ಟಿ ಬಂಧಿಸಿದ್ದಾರೆ.

ಬಂದಿತ ಆರೋಪಿಗಳನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಂಜುನಾಥ ನಾಗೇಂದ್ರ ಕಾಜಗಾರ, ಮುಂಡಗೋಡದ ಇಂದಿರಾನಗರದ ಶ್ರೀಕಾಂತ ರಾಜಶೇಖರ ಕಿರಣ್ಣನವರ, ಧಾರವಾಡ ನಿವಾಸಿಗಳಾದ ವಿಜಯ ರೋಡ್‌ನ ಮಂಜುನಾಥ ವಿಷ್ಣು ಬೆಳಗಾಂವ, ಅಗಸಿ ಸರ್ಕಲ್ ಹೆಬ್ಬಳ್ಳಿಯ ಅಭಿಷೇಕ ಮಲ್ಲಿಕಾರ್ಜುನ ಬಡಶೆಟ್ಟಿ ಹಾಗೂ ಮೆಣಸಿನಕಾಯಿ ಓಣಿಯ ದೀಪಕ ನಾಗರಾಜ ನವಲೆ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳು, 1 ಕಾರು, 2 ಕಂಟ್ರಿ ಮೇಡ್ ಪಿಸ್ತೂಲ್ (ನಾಡಪಿಸ್ತೂಲ್) ಹಾಗೂ 6 ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಸ್ತಗಿರಿ ನಿಯಮಗಳನ್ನು ಪಾಲಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್, ಗೋಕರ್ಣ ಪಿಐ ಶ್ರೀಧರ ಎಸ್.ಆರ್., ಹಾಗೂ ಪಿಎಸ್ಐಗಳಾದ ಮಂಜುನಾಥ ಗೌಡರ, ಪರಶುರಾಮ ಮಿರ್ಜಗಿ, ರಾಜಶೇಖರ ವಂದಲಿ, ಖಾಸಿಂ ಸೇರಿದಂತೆ ವಿವಿಧ ಠಾಣೆಗಳ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೇವಲ 24 ಗಂಟೆಯಲ್ಲಿ ಕೊಲೆಗಡುಕರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಈ ಪೊಲೀಸ್ ತಂಡವನ್ನು ಹಿರಿಯ ಅಧಿಕಾರಿಗಳು ತೀವ್ರವಾಗಿ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *