Spread the love

ಭಟ್ಕಳ: ಪ್ರಸಿದ್ಧ ಯಾತ್ರಾಸ್ಥಳ ಮುರ್ಡೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗ್‌ನಿಂದ ಚಿನ್ನದ ಸರ ಎಗರಿಸಿದ್ದ ಅಂತರ-ಜಿಲ್ಲಾ ಮಹಿಳಾ ಕಳ್ಳಿಯನ್ನು ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿತಳನ್ನು ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಗಂಗಮ್ಮ ಹಣಮಂತಪ್ಪ ಮುಟಗಾರ ಎಂದು ಗುರುತಿಸಲಾಗಿದೆ. ಬಂಧನದ ಬಳಿಕ ಈಕೆಯ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕರಗಿಸಿದ ಬಂಗಾರದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಪಿರ್ಯಾದಿದಾರರು ತಮ್ಮ ಕುಟುಂಬ ಸಮೇತ ಮುರ್ಡೇಶ್ವರ ದೇವಸ್ಥಾನಕ್ಕೆ ದರ್ಶನ ಪಡೆಯಲು ಬಂದಿದ್ದಾಗ, ದೇವಸ್ಥಾನದ ಜನಜಂಗುಳಿಯ ಲಾಭ ಪಡೆದ ಖದೀಮೆ ತಾಯಿಯ ಬ್ಯಾಗ್‌ನಲ್ಲಿದ್ದ ಅಂದಾಜು 36 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಳು. ಈ ಬಗ್ಗೆ ಸರ ಕಳೆದುಕೊಂಡ ಭಕ್ತರು ನೀಡಿದ ದೂರಿನ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೇಲಾಧಿಕಾರಿಗಳ ಆದೇಶದಂತೆ ವಿಶೇಷ ಪತ್ತೆ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ತಂಡವು, ಏಪ್ರಿಲ್ 24ರಂದು ಗಂಗಮ್ಮಳನ್ನು ದಸ್ತಗಿರಿ ಮಾಡಿದೆ. ಆರೋಪಿಯು ತಾನು ಕದ್ದಿದ್ದ ಬಂಗಾರದ ಸರವನ್ನು ಕರಗಿಸಿದ್ದು, ಆಕೆಯ ವಶದಿಂದ ಬರೋಬ್ಬರಿ 3,28,000 ರೂ. ಮೌಲ್ಯದ 27.60 ಗ್ರಾಂ ತೂಕದ ಎರಡು ಬಂಗಾರದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಸ್ತಗಿರಿ ನಿಯಮಗಳನ್ನು ಪಾಲಿಸಿ ಆರೋಪಿತಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎನ್.ಎಂ., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಭಟ್ಕಳ ಡಿವೈಎಸ್ಪಿ ಗಿರೀಶ ಬಿ. ಹಾಗೂ ಮುರ್ಡೇಶ್ವರ ಸಿಪಿಐ ಜಗದೀಶ ಹಂಚನಾಳ ಅವರ ಮಾರ್ಗದರ್ಶನದಲ್ಲಿ ಜರುಗಿದೆ.

ಕಾರ್ಯಾಚರಣೆಯ ನೇತೃತ್ವವನ್ನು ಪಿಎಸ್ಐಗಳಾದ ಹಣಮಂತ ಬಿರಾದಾರ ಹಾಗೂ ಲೋಕನಾಥ ರಾಥೋಡ ವಹಿಸಿದ್ದರು. ಠಾಣೆಯ ಸಿಬ್ಬಂದಿಗಳಾದ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ಸಿದ್ದಪ್ಪ ಕಾಂಬಳೆ ಹಾಗೂ ವಿಜಯ ನಾಯ್ಕ ಅವರು ಪಾಲ್ಗೊಂಡಿದ್ದರು. ಕಳ್ಳಿಯನ್ನು ತ್ವರಿತವಾಗಿ ಪತ್ತೆಹಚ್ಚಿದ ಈ ತಂಡದ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *