Spread the love

ಭಟ್ಕಳ: ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಸಮುದ್ರದಲ್ಲಿ ಚಿಪ್ಪು ಹೆಕ್ಕಲು (ಸಂಗ್ರಹಿಸಲು) ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ದೈತ್ಯ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಜಲಸಮಾಧಿಯಾಗಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಘಟನೆಯ ವಿವರ

ಭಾನುವಾರ ರಜೆಯ ದಿನವಾದ್ದರಿಂದ ಒಟ್ಟು 13 ಜನರಿದ್ದ ತಂಡವೊಂದು ಅಳಿವೆಕೋಡಿ ಸಮುದ್ರ ತೀರಕ್ಕೆ ತೆರಳಿತ್ತು. ಈ ವೇಳೆ ಸಮುದ್ರದಲ್ಲಿ ಚಿಪ್ಪು ತೆಗೆಯಲು ನೀರಿನಲ್ಲಿ ಇಳಿದಾಗ, ಏಕಾಏಕಿ ಬಂದ ಭಾರೀ ಅಲೆಗಳ ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ಸಮುದ್ರದ ಪಾಲಾಗಿದ್ದಾರೆ.

ಈ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಎಲ್ಲರೂ ಒಂದೇ ಕುಟುಂಬದವರು ಎಂಬುದು ದೃಢಪಟ್ಟಿದೆ. ಅಲೆಗಳ ಅಬ್ಬರಕ್ಕೆ ಕೊಚ್ಚಿಹೋದ ಮೂವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮೃತಪಟ್ಟವರೆಲ್ಲರೂ ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.

ಮುಗಿಲುಮುಟ್ಟಿದ ಆಕ್ರಂದನ

ಸಮುದ್ರದಲ್ಲಿ ಕೊಚ್ಚಿಹೋದವರ ಪೈಕಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಎರಡು ಮೃತದೇಹಗಳನ್ನು ಆರ್.ಎನ್.ಎಸ್ (RNS) ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿ ಅಸುನೀಗಿದ ಸುದ್ದಿ ತಿಳಿದು ಆಸ್ಪತ್ರೆಯ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಆಸ್ಪತ್ರೆಗೆ ಮುಖಂಡರ ದೌಡು

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ದೌಡಾಯಿಸಿದ್ದಾರೆ. ಮಾಜಿ ಶಾಸಕ ಸುನಿಲ್ ನಾಯ್ಕ್, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಮುಖಂಡ ದಿನೇಶ್ ನಾಯ್ಕ್ ಮುಂಡಳ್ಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ್, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡ ದೀಪಕ್ ನಾಯ್ಕ್ ಸೇರಿದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಘಟನೆ ಕುರಿತಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *