ಅಂಕೋಲಾ: ತಾಲೂಕಿನ ಅವರ್ಸಾದಲ್ಲಿ ಶ್ರೀ ಕಾತ್ಯಾಯನಿ ಕ್ರಿಕೆಟರ್ಸ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಅವರ್ಸಾ ಕ್ರಿಕೆಟ್ ಲೀಗ್–2026 (ಶ್ರೀ ಭೂದೇವಿ ಕಪ್) ಸೀಸನ್–2’ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಏಪ್ರಿಲ್ 17 ರಿಂದ 19 ರವರೆಗೆ ಶ್ರೀ ಕಾತ್ಯಾಯನಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಈ 3 ದಿನಗಳ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡು ರೋಚಕ ಪಂದ್ಯಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದವು.
ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಾಹೀಶ್ ಮತ್ತು ಮಾರುತಿ ನಾಯ್ಕ ಮಾಲೀಕತ್ವದ ‘ಲಕ್ಷ್ಮೀ ನಾರಾಯಣ ವಾರಿಯರ್ಸ್’ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಸೂರಜ್ ನಾಯ್ಕ ಹಾಗೂ ಶ್ರೀಗಣೇಶ ನಾಯಕ ಮಾಲೀಕತ್ವದ ‘ಲಕ್ಷ್ಮೀ ನಾರಾಯಣ ರಾಕರ್ಸ್’ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ರೈಲ್ವೆ ಸ್ಟಾರ್ಸ್ ಅವರ್ಸಾ 3 ನೇ ಸ್ಥಾನ ಮತ್ತು ಕಾತ್ಯಾಯನಿ ವಾರಿಯರ್ಸ್ ಅವರ್ಸಾ 4 ನೇ ಸ್ಥಾನಗಳನ್ನು ಪಡೆದುಕೊಂಡವು. ಇವುಗಳ ಜೊತೆಗೆ ನಾಗದೇವತಾ ಹಂಟರ್ಸ್ ಸಕಲಬೇಣ, ಮಹಾಸತಿ ಹಿಟ್ಟರ್ಸ್, ಶ್ರೀ ಉಮಾ ಮಹೇಶ್ವರ ದಂಡೆಬಾಗ ಹಾಗೂ ಅವರ್ಸಾ ಇಂಡಿಯನ್ಸ್ ತಂಡಗಳು ಕೂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದವು.

ಟೂರ್ನಿಯ ವಿಜೇತ ತಂಡಗಳಿಗೆ ಪ್ರಥಮ ₹40,000, ದ್ವಿತೀಯ ₹30,000, ತೃತೀಯ ₹20,000 ಹಾಗೂ ಚತುರ್ಥ ₹10,000 ನಗದು ಬಹುಮಾನಗಳನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಪ್ರಾಯೋಜಿಸಿ, ಕ್ರೀಡಾಭಿವೃದ್ಧಿಗೆ ಉತ್ತೇಜನ ನೀಡಿದರು. ಅಷ್ಟೇ ಅಲ್ಲದೆ, ಮುಂದಿನ ವರ್ಷವೂ ಈ 4 ನಗದು ಬಹುಮಾನಗಳನ್ನು ತಾವೇ ನೀಡುವುದಾಗಿ ಅವರು ಇದೇ ವೇಳೆ ಘೋಷಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಯುವಕರಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುವಲ್ಲಿ ಇಂತಹ ಕ್ರೀಡಾಕೂಟಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಪ್ರಶಂಸಿಸಿದರು.
ಕ್ರೀಡೆಗೆ ನಿರಂತರ ಬೆಂಬಲ ನೀಡುತ್ತಿರುವ ರೂಪಾಲಿ ನಾಯ್ಕ ಅವರನ್ನು ಸಂಘಟಕರು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು. ಬಳಿಕ ಉದ್ದಿಮೆದಾರ ಪರಬತ್ ಎಸ್. ನಾಯ್ಕ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಈ ಸಮಾರಂಭದಲ್ಲಿ ಪ್ರಮುಖರಾದ ಉದ್ದಿಮೆದಾರ ತುಳಸಿದಾಸ ಕಾಮತ, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಷ್ ನಾಯಕ, ಕ್ಷತ್ರಿಯ ಕೋಮಾರಪಂಥ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜೇಶ್ ಗಜಾನನ ನಾಯ್ಕ, ಹಾರವಾಡ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಟಾಕೇಕರ, ಅವರ್ಸಾ ಗ್ರಾ.ಪಂ. ಮಾಜಿ ಸದಸ್ಯ ಅನಂತ ಭಟ್, ಪ್ರಸಾದ್ ಗಜಾನನ ನಾಯ್ಕ, ಸೇರಿದಂತೆ ಗಣೇಶ ಸೋಮಾ ನಾಯ್ಕ, ವಸಂತ ಎಂ ನಾಯ್ಕ, ಸೂರಜ್ ಪಿ ನಾಯಕ ಹಾಗೂ ವಿಶಾಲ ವಿ ಬಾನಾವಳಿಕರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
