ಹೊನ್ನಾವರ: ಜಿಲ್ಲೆಯ ಹೊನ್ನಾವರದಲ್ಲಿ ಪ್ರಾದೇಶಿಕ ಸಾರಿಗೆ (RTO) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಿತಿಗಿಂತ ಹೆಚ್ಚು ಭಾರ (ಓವರ್ ಲೋಡ್) ತುಂಬಿಕೊಂಡು ಹೋಗುತ್ತಿದ್ದ ಬರೋಬ್ಬರಿ 17 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪಣಂಬೂರಿನಿಂದ ಹೊನ್ನಾವರದ ಕಡೆಗೆ ಬರುತ್ತಿದ್ದ ಈ ವಾಹನಗಳನ್ನು ಮಾರ್ಗಮಧ್ಯೆ ತಡೆದು ಅಧಿಕಾರಿಗಳು ತೀವ್ರ ವಿಚಾರಣೆ ಮತ್ತು ತಪಾಸಣೆ ನಡೆಸಿದಾಗ ಈ ಓವರ್ ಲೋಡ್ ಸಾಗಾಟದ ಅಕ್ರಮ ಬೆಳಕಿಗೆ ಬಂದಿದೆ.
ವಶಪಡಿಸಿಕೊಂಡ ಎಲ್ಲಾ 17 ವಾಹನಗಳಲ್ಲಿ ಭಾರಿ ಗಾತ್ರದ ಶಿಲೆ ಕಲ್ಲುಗಳನ್ನು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಓವರ್ ಲೋಡ್ ಮಾಡಿ ಸಾಗಿಸಲಾಗುತ್ತಿತ್ತು. ಮೂಲಗಳ ಪ್ರಕಾರ, ಹೊನ್ನಾವರದ ಕಾಸರಕೋಡದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ವಿಸ್ತರಣೆ ಮತ್ತು ನಿರ್ಮಾಣ ಕಾಮಗಾರಿಗೆ ಬಳಸಲು ಈ ಬೃಹತ್ ಕಲ್ಲುಗಳನ್ನು ತರಲಾಗುತ್ತಿತ್ತು ಎಂಬ ನಿಖರ ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಗಾತ್ರದ ಕಲ್ಲುಗಳನ್ನು ಸಾಗಿಸುತ್ತಿದ್ದ ಕಾರಣಕ್ಕೆ ಅಧಿಕಾರಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸದ್ಯ ಕಾರ್ಯಾಚರಣೆ ವೇಳೆ ಜಪ್ತಿ ಮಾಡಲಾದ ಎಲ್ಲಾ 17 ವಾಹನಗಳನ್ನು ಹೊನ್ನಾವರ ಪೊಲೀಸ್ ಮೈದಾನದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿದ್ದು, ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
