ಕಾರವಾರ: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ, ಉತ್ತರ ಕನ್ನಡ ಜಿಲ್ಲೆಯ ಸಮಾಜ ಸೇವೆ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಡಾ. ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಕೈಬಿಟ್ಟು, ಸಂಕೀರ್ಣ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ, ಲೇಖಕ ಹಾಗೂ ರಂಗಕರ್ಮಿ ಗಜಾನನ ಉಮಾಮಹೇಶ್ವರ ಭಟ್ (ಜಿ.ಯು. ಭಟ್) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
71ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಅಕ್ಟೋಬರ್ 30ರಂದು ಆದೇಶ ಹೊರಡಿಸಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಿದ್ದುಪಡಿ ಆದೇಶ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಸಮಾಜ ಸೇವೆ ಕ್ಷೇತ್ರದಲ್ಲಿ ಡಾ. ಜಿ.ಎಸ್. ಚಂದ್ರಶೇಖರ್ ಅವರ ಬದಲಾಗಿ ಜಿ.ಯು. ಭಟ್ ಅವರನ್ನು ಸಂಕೀರ್ಣ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ತಾಂತ್ರಿಕ ಕಾರಣಗಳಿಂದಾಗಿ ಈ ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ ಎನ್. ಅವರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಸೇವೆ
ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರು ಮಾಧ್ಯಮ ಕ್ಷೇತ್ರದಲ್ಲಿ ‘ಜೀಯು’ ಎಂದೇ ಖ್ಯಾತರಾಗಿದ್ದಾರೆ. 1948ರ ಮೇ 3ರಂದು ಜನಿಸಿದ ಅವರು, ಪತ್ರಿಕೋದ್ಯಮ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಕಿರುತೆರೆ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಸೇಂಟ್ ಥಾಮಸ್ ಹೈಸ್ಕೂಲ್ ಹಾಗೂ ಎಸ್.ಡಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಪತ್ರಿಕೋದ್ಯಮ ಮತ್ತು ಮುದ್ರಣ ವೃತ್ತಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು. ‘ಉದಯವಾಣಿ’ ಪತ್ರಿಕೆಯ ಹಿರಿಯ ವರದಿಗಾರರಾಗಿ 55 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಹೊನ್ನಾವರ ವರದಿಗಾರರಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
‘ಗ್ರಾಮ ವಿಕಾಸ’ ವಾರಪತ್ರಿಕೆಯ ಸಂಪಾದಕರಾಗಿ ಹಾಗೂ ‘ಸಮನ್ವಯ’ ವಾರಪತ್ರಿಕೆಯ ಸ್ಥಾನಿಕ ಸಂಪಾದಕರಾಗಿಯೂ ಪತ್ರಿಕಾರಂಗಕ್ಕೆ ಕೊಡುಗೆ ನೀಡಿದ್ದಾರೆ. ‘ಶಿರಸಿ ಸಮಾಚಾರ’ ದಿನಪತ್ರಿಕೆಯ ಅಂಕಣಕಾರರಾಗಿ ಹಾಗೂ ಹೊನ್ನಾವರದ ‘ನುಡಿಸಿರಿ’ ವಾಹಿನಿಯ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ ಆಗುಹೋಗುಗಳ ಕುರಿತು ಸುಮಾರು 50 ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ವರದಿಗಳು ಹಾಗೂ 3 ಸಾವಿರಕ್ಕೂ ಹೆಚ್ಚು ಲೇಖನ ಮತ್ತು ಅಂಕಣಗಳನ್ನು ಬರೆದಿರುವುದು ಅವರ ಪತ್ರಿಕೋದ್ಯಮದ ಸಾಧನೆಯಾಗಿದೆ.

ರಂಗಭೂಮಿ, ಚಲನಚಿತ್ರದಲ್ಲೂ ಛಾಪು
ಬಿ.ವಿ. ಕಾರಂತರ ಅಧ್ಯಕ್ಷತೆಯ ಅವಧಿಯಲ್ಲಿ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಜಿ.ಯು. ಭಟ್ ಜವಾಬ್ದಾರಿ ನಿರ್ವಹಿಸಿದ್ದರು. ‘ಜೋಕುಮಾರ ಸ್ವಾಮಿ’, ‘ಅಂಧಯುಗ’, ‘ಬೇಲಿ ಮತ್ತು ಹೊಲ’, ‘ಆಷಾಢದ ಒಂದು ದಿನ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿ, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹರಿಶ್ಚಂದ್ರ ಭಟ್ ನಿರ್ದೇಶನದ ದೂರದರ್ಶನ ಧಾರಾವಾಹಿ ‘ಶೋಧ’, ಕಾಶಿನಾಥ್ ಅವರ ‘ಅನುಭವ’, ಅಂಬರೀಶ್ ಅಭಿನಯದ ‘ಗಿರಿಬಾಲೆ’, ಕೊಂಕಣಿ ಮತ್ತು ಕನ್ನಡ ಭಾಷೆಗಳ ‘ಅಪ್ಸರಧಾರಾ’ ಹಾಗೂ ವಿಶಾಲರಾಜ್ ನಿರ್ದೇಶನದ ಸ್ವಾತಂತ್ರ್ಯ ಹೋರಾಟದ ಕಥಾಹಂದರದ ‘ದಂಡಿ’ ಚಿತ್ರಗಳಲ್ಲಿ ನಟಿಸಿದ್ದಾರೆ.
ಒಂಬತ್ತು ಕೃತಿಗಳ ಮೂಲಕ ಸಾಹಿತ್ಯ ಕೊಡುಗೆ
ಉದಯವಾಣಿಯ ಅಂಕಣ ಬರಹಗಳ ಸಂಕಲನ ‘ಉತ್ತರ ಕನ್ನಡ ಕಥೆ-ವ್ಯಥೆ’, ‘ಕರಾವಳಿ’, ‘ಇಳೆ ಕಾದಿದೆ ಮನ ಅರಳಿದೆ’, ‘ಮುರ್ಡೇಶ್ವರ ಮತ್ತು ಇಡಗುಂಜಿ’ ಕ್ಷೇತ್ರ ಪರಿಚಯ, ‘ಕರ್ಮಯೋಗಿ ಡಾ. ಆರ್.ಎನ್. ಶೆಟ್ಟಿ’, ‘ವಿ.ಸೀ. 71’ ಅಭಿನಂದನಾ ಗ್ರಂಥ, ‘ಬಹುಮುಖಿ’, ‘ಅಕ್ಷರ ಭಾರತಿ’, ‘ಜನವಾಣಿ’ ಸೇರಿದಂತೆ ಅವರ ಆಯ್ದ ಬರಹಗಳ 9 ಕೃತಿಗಳು ಪ್ರಕಟವಾಗಿವೆ. 75ನೇ ವರ್ಷದ ಸಂಭ್ರಮದಲ್ಲಿ ‘ಜೀವನದಿ’ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ.
ಸಹಕಾರ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆ
ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲೂ ಜಿ.ಯು. ಭಟ್ ಸಕ್ರಿಯರಾಗಿದ್ದಾರೆ. ದೇವರಾಜ ಅರಸು ಅವರ ಅಧಿಕಾರಾವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೆ.ಡಿ.ಸಿ.ಸಿ. ಬ್ಯಾಂಕ್ ಹಾಗೂ ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಜೇನು ಸೊಸೈಟಿಯ ಅಧ್ಯಕ್ಷರಾಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ಅರೇಅಂಗಡಿಯ ಎಸ್.ಕೆ.ಪಿ. ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಹಾಗೂ ಎಸ್.ಡಿ.ಎಂ. ಕಾಲೇಜು ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿ ತಾರಾ ಭಟ್ ಅವರು ಹಿಂದುಸ್ತಾನಿ ಗಾಯಕಿಯಾಗಿದ್ದಾರೆ.
ಹಲವು ಪ್ರಶಸ್ತಿಗಳ ಗೌರವ
ಜಿ.ಯು. ಭಟ್ ಅವರಿಗೆ ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ‘ಶಾಮರಾವ್ ಪ್ರಶಸ್ತಿ’, 2002ರಲ್ಲಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ರಾಜ್ಯ ಪತ್ರಕರ್ತರ ಸಂಘದ ಡಿ.ವಿ.ಜಿ. ಜನ್ಮದಿನೋತ್ಸವ ಪುರಸ್ಕಾರ, 2015ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಲಭಿಸಿವೆ.
2017ರಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ‘ನಾಗರಿಕ’ ವಾರಪತ್ರಿಕೆಯಿಂದ ‘ಜೀವನದಿ ಜೀಯು’ ಗೌರವ, ಡಾ. ಟಿ.ಎಂ.ಎ. ಪೈ ಆರೋಗ್ಯ ಸೇವಕ ಪ್ರಶಸ್ತಿ ಹಾಗೂ 2018ರಲ್ಲಿ ಸಮರ್ಥ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ‘ಕೆಂಪೇಗೌಡ ಪ್ರಶಸ್ತಿ’ ಪಡೆದಿದ್ದಾರೆ.
2025ರಲ್ಲಿ ಕೆ.ಯು.ಡಬ್ಲ್ಯೂ.ಜೆ.ಯ ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಹಾಗೂ ಪ್ರಸಕ್ತ ವರ್ಷ ವಿ. ಸೀತಾರಾಮಯ್ಯ ಮಾಧ್ಯಮ ಗೌರವವೂ ಅವರಿಗೆ ಲಭಿಸಿದೆ.
ನಾಡು ಕಂಡ ಅಪರೂಪದ ಬಹುಮುಖಿ ಸಾಧಕರಾದ ಜಿ.ಯು. ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ.
