ಶಿರಸಿ: ತಾಲೂಕಿನ ಬಿಳಗಿರಿಕೊಪ್ಪದಲ್ಲಿ ಅನಾರೋಗ್ಯ ಹಾಗೂ ಹಳೆಯ ಅಪಘಾತದ ಗಾಯದ ಸಮಸ್ಯೆಯಿಂದ ಬೇಸತ್ತ ಯುವಕನೊಬ್ಬ ತನ್ನದೇ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತನ ತಾಯಿ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಸಹಜ ಮರಣ (UDR) ಪ್ರಕರಣ ದಾಖಲಾಗಿದೆ.
ಮೃತನನ್ನು ಬಿಳಗಿರಿಕೊಪ್ಪ ನಿವಾಸಿ, 30 ವರ್ಷದ ಕೂಲಿ ಕಾರ್ಮಿಕ ನವೀನ ಮಂಜುನಾಥ ಶೇಟ್ ಎಂದು ಗುರುತಿಸಲಾಗಿದೆ. ಕಳೆದ 9 ವರ್ಷಗಳ ಹಿಂದೆ ನವೀನ್ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರಾಡ ಎಂಬಲ್ಲಿ ಬಂಗಾರದ ಕೆಲಸದಲ್ಲಿದ್ದನು. ಆ ಸಂದರ್ಭದಲ್ಲಿ ಬಂಗಾರವನ್ನು ಕ್ಲೀನ್ ಮಾಡಲು ಬಳಸುವ ಆಸಿಡ್ ಅನ್ನು ಬೈಕ್ ಮೇಲೆ ತರುತ್ತಿದ್ದಾಗ, ಆಕಸ್ಮಿಕವಾಗಿ ಅದು ಮುಖಕ್ಕೆ ಸಿಡಿದಿತ್ತು. ಈ ಭೀಕರ ಅಪಘಾತದಿಂದಾಗಿ ಆತನ ಮುಖದ ಎಡಭಾಗ ಮತ್ತು ಮೂಗು ಸಂಪೂರ್ಣ ಸುಟ್ಟು ಗಾಯಗೊಂಡಿದ್ದವು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಆತನಿಗೆ ಮೂಗಿನಿಂದ ಸರಾಗವಾಗಿ ಉಸಿರಾಡಲು ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕಳೆದ 8 ದಿನಗಳ ಹಿಂದೆಯಷ್ಟೇ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆಯನ್ನೂ (Surgery) ಮಾಡಿಸಲಾಗಿತ್ತು.
ಶಸ್ತ್ರಚಿಕಿತ್ಸೆಯಾದರೂ ಉಸಿರಾಟದ ತೊಂದರೆ ಮತ್ತು ಮುಖದ ಮೇಲಿನ ಕಲೆಗಳು ನಿವಾರಣೆಯಾಗದ ಕಾರಣ ನವೀನ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದೇ ವಿಚಾರವನ್ನು ಸದಾ ಮನಸ್ಸಿಗೆ ಹಚ್ಚಿಕೊಂಡು ನೊಂದಿದ್ದನು.
ಶನಿವಾರ (ಮೇ 30) ನವೀನನ ತಾಯಿ ಕಸ್ತೂರಿ ಅವರು ಹಾವೇರಿಯಲ್ಲಿರುವ ತಮ್ಮ ತಮ್ಮನ ಮನೆಗೆ ತೆರಳಿದ್ದರು. ಈ ವೇಳೆ ನವೀನ ಮನೆಯಲ್ಲಿ ಒಬ್ಬನೇ ಇದ್ದನು. ಸೋಮವಾರ(ಜೂ.1) ರಾತ್ರಿ 10:45 ರಿಂದ ಮಂಗಳವಾರ(ಜೂ.02) ಬೆಳಿಗ್ಗೆ 06:30 ರ ನಡುವಿನ ಅವಧಿಯಲ್ಲಿ ಈ ಆತ್ಮಹ*ತ್ಯೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ ನವೀನ, ತೀವ್ರ ಬೇಸರದಿಂದ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿಪೆಟ್ಟಿಗೆಯಿಂದ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರವಾಗಿ ಮೈ ಸುಟ್ಟುಕೊಂಡ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಹಾವೇರಿಯಿಂದ ವಾಪಸ್ ಬಂದ ತಾಯಿ ಕಸ್ತೂರಿ ಅವರು ಮಗನ ಸಾವನ್ನು ಕಂಡು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗನ ಸಾವಿನಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಪೊಲೀಸರು ಕಲಂ 149 ರ ಅಡಿಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
