Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರವೀಂದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪ್ರೇಮಿ ಹಾಗೂ ಖ್ಯಾತ ಸಮಾಜಸೇವಕರಾದ ಬಾಲಕೃಷ್ಣ ನಾಯಕ ಅವರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸುವ ಶ್ಲಾಘನೀಯ ಕಾರ್ಯಕ್ರಮ ಜರುಗಿತು.

ಶಾಲೆಯ ಒಟ್ಟು 44 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್‌ಗಳು ಹಾಗೂ ಅಗತ್ಯ ಪಠ್ಯಪುಸ್ತಕಗಳನ್ನು ವೈಯಕ್ತಿಕವಾಗಿ ವಿತರಿಸಿದ ಬಾಲಕೃಷ್ಣ ನಾಯಕ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಥ್ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶೈಕ್ಷಣಿಕ ನೆರವು ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಬಾಲಕೃಷ್ಣ ನಾಯಕ ಅವರು, ಈ ಬಾರಿಯೂ ತಮ್ಮ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿದ್ದಾರೆ. ಅವರ ಈ ಜನಪರ ಕಾರ್ಯಕ್ಕೆ ಶಾಲಾ ಮಂಡಳಿ ಹಾಗೂ ಪೋಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಅಪೂರ್ವ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಸೋಮೇಶ್ವರ ನಾಯ್ಕ, ಸಮರ್ಪಣಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್, ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರಾಜ ನಾಯ್ಕ ಹಾಗೂ ಪ್ರಮುಖರಾದ ಸಂಜು ಜಾದವ್ ಉಪಸ್ಥಿತರಿದ್ದರು. ಇವರೊಂದಿಗೆ ರವೀಂದ್ರನಗರದ ಹಿರಿಯರು, ಪೋಷಕರು, ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ನಾಯಕ ಸೇರಿದಂತೆ ಶಾಲೆಯ ಇಡೀ ಶಿಕ್ಷಕ ವೃಂದದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *