Spread the love

ಯಲ್ಲಾಪುರ: ಬೆಳಗಾವಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮೂರಿಗೆ ವಾಪಸ್ಸಾಗುತ್ತಿದ್ದ ಮಿನಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್ ಘಟ್ಟದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅರಬೈಲ್ ಮೂಲದ ನಿವಾಸಿಗಳು ಬೆಳಗಾವಿಯಲ್ಲಿ ಸಂಬಂಧಿಕರ ಮದುವೆಗೆ ತೆರಳಿ, ಕಾರ್ಯಕ್ರಮ ಮುಗಿಸಿ ಅದೇ ಮಿನಿ ಬಸ್‌ನಲ್ಲಿ ಹಿಂತಿರುಗುತ್ತಿದ್ದರು. ಇನ್ನೇನು ಕೇವಲ ಎರಡು ಕಿಲೋಮೀಟರ್ ಸಾಗಿದ್ದರೆ ಎಲ್ಲರೂ ಸುಖಕರವಾಗಿ ತಮ್ಮ ತಮ್ಮ ಮನೆಗಳನ್ನು ತಲುಪುತ್ತಿದ್ದರು. ಆದರೆ, ಮನೆ ಸಮೀಪಿಸುತ್ತಿದ್ದಂತೆಯೇ ಅರಬೈಲ್ ಘಟ್ಟದಲ್ಲಿ ವಾಹನ ದಿಢೀರ್ ಚಾಲಕನ ನಿಯಂತ್ರಣ ಕಳೆದುಕೊಂಡು ನೇರವಾಗಿ ರಸ್ತೆ ಬದಿಯ ಗುಡ್ಡಕ್ಕೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ಮಿನಿ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಒಳಗಿದ್ದ 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತದ ದೃಶ್ಯ ಕಂಡ ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು, ವಾಹನದಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *