ಕುಮಟಾ: ಕುಮಟಾದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರು ಜನ ಸೆಂಟ್ರಿಂಗ್ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಜುಲೈ 28 ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಜುಲೈ 27 ರಂದು ಮಧ್ಯಾಹ್ನದ ವಿಭಿನ್ನ ಸಮಯಗಳಲ್ಲಿ ಈ ಕಾರ್ಯಾಚರಣೆಗಳು ನಡೆದಿವೆ.
ಹೊಸ ಹೆರವಟ್ಟಾ ಬಳಿ ಇಬ್ಬರ ಸೆರೆ
ಕುಮಟಾ ಪೊಲೀಸ್ ಠಾಣೆಯ ಪಿ.ಎಸ್.ಐ (ತನಿಖೆ-01) ಸಾವಿತ್ರಿ ನಾಯಕ ಅವರು ನೀಡಿದ ದೂರಿನನ್ವಯ ಹೊಸ ಹೆರವಟ್ಟಾದ ಕ್ಯಾಶ್ಯೂ ಫ್ಯಾಕ್ಟರಿ ರಸ್ತೆಯ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಮಿಂಟು ರಾಯ್ (19) ಹಾಗೂ ನಾರ್ಥ್ 24 ಪರಗಣ ಜಿಲ್ಲೆಯ ರೋಹಿತ್ ಚಕ್ರಬೊರ್ತಿ (25) ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರೂರು ಗುಡ್ಡದ ಬಳಿ ಕಾರ್ಯಾಚರಣೆ
ಪಿ.ಎಸ್.ಐ (ತನಿಖೆ-02) ಮಯೂರ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಮೂರೂರು ಗುಡ್ಡದ ಹತ್ತಿರ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿ ಗಾಂಜಾ ಅಮಲಿನಲ್ಲಿದ್ದ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಬಿಧಾಯಕ ಬಿಸ್ವಾಸ (48) ಮತ್ತು ತಪನಪಾಲ (42) ಎಂಬುವವರನ್ನು ವಶಕ್ಕೆ ಪಡೆದು, ದೂರು ದಾಖಲಿಸಿಕೊಳ್ಳಲಾಗಿದೆ.
ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಇಬ್ಬರ ವಶ
ಸಂಚಾರಿ ಠಾಣೆಯ ಪಿ.ಎಸ್.ಐ ರವಿ ಎನ್ ಗುಡ್ಡಿ ಅವರು ರೈಲ್ವೆ ಸ್ಟೇಷನ್ ಬಳಿಯ ಗ್ಯಾಸ್ ಗೋಡೌನ್ಗೆ ಹೋಗುವ ರಸ್ತೆಯ ಪಕ್ಕದಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಹಿಡಿದಿದ್ದಾರೆ. ಆರೋಪಿಗಳಾದ ನದಿಯಾ ಜಿಲ್ಲೆಯ ಆಶಿಸ್ ಮೊಂಡಲ (39) ಹಾಗೂ ಪ್ರಕಾಶ ಮೊಂಡಲ (24) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ದೃಢ
ವಶಕ್ಕೆ ಪಡೆದ ಎಲ್ಲಾ ಆರು ಜನ ಆರೋಪಿಗಳನ್ನು ಕುಮಟಾ ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಎಲ್ಲರೂ ಮಾದಕ ವಸ್ತು (Tetrahydrocannabinol) ಸೇವಿಸಿರುವುದು ದೃಢಪಟ್ಟಿದೆ (Positive). ಈ ಹಿನ್ನೆಲೆಯಲ್ಲಿ, ವೈದ್ಯಕೀಯ ವರದಿಯ ಆಧಾರದ ಮೇಲೆ ಎಲ್ಲಾ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಕಲಂ 27(b) ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
