ಅಂಕೋಲಾ: ಮಾರುಕಟ್ಟೆಯಲ್ಲಿ ಮತ್ತೊಮ್ಮೆ ನಕಲಿ ನೋಟುಗಳ ಹಾವಳಿ ಸದ್ದು ಮಾಡತೊಡಗಿದ್ದು, ಅಂಕೋಲಾ ನಗರದಲ್ಲಿ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಪಟ್ಟಣದ ಪ್ರತಿಷ್ಠಿತ ಬೇಕರಿಯೊಂದರಲ್ಲಿ ತಿನಿಸು ಖರೀದಿಸಿದ ಅಪರಿಚಿತ ವ್ಯಕ್ತಿಯೊಬ್ಬ, ಅಸಲಿ ನೋಟುಗಳ ಗುಂಪಿನಲ್ಲಿ ಒಂದು ನಕಲಿ ನೋಟನ್ನು ಸೇರಿಸಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಅಂಗಡಿಗೆ ಬಂದಿದ್ದ ಈ ವ್ಯಕ್ತಿ, ಹಣ ನೀಡುವಾಗ ಹತ್ತು ರೂಪಾಯಿಯ ಮಕ್ಕಳ ಆಟಿಕೆಯ ನೋಟೊಂದನ್ನು ಸೇರಿಸಿ ನೀಡಿದ್ದಾನೆ. ಈ ನೋಟು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ (Children Bank of India) ಎಂಬ ಶೀರ್ಷಿಕೆ ಹೊಂದಿದ್ದರೂ, ನೋಡಲು ಥೇಟ್ ಅಸಲಿ 10 ರೂ. ನೋಟಿನಂತೆಯೇ ಇತ್ತು. ವ್ಯಾಪಾರದ ಭರದಲ್ಲಿದ್ದ ಬೇಕರಿ ಮಾಲೀಕ ಅದನ್ನು ಗಮನಿಸದೆ ಹಣ ಪಡೆದಿದ್ದಾರೆ. ನಂತರ ಬೇರೆ ಗ್ರಾಹಕರಿಗೆ ಚಿಲ್ಲರೆ ನೀಡುವಾಗ ಅದೇ ನೋಟು ಕೈಗೆ ಸಿಕ್ಕಿದ್ದು, ಆವಾಗಲೇ ಅದು ನಕಲಿ ಎಂಬುದು ಸ್ಪಷ್ಟವಾಗಿದೆ.
ವಿವಿಧೆಡೆ ನಕಲಿ ನೋಟು ಚಲಾವಣೆ ಶಂಕೆ
ಈ ನಕಲಿ ನೋಟು ತಾಲೂಕಿನ ಹಲವಾರು ಕಡೆಗಳಲ್ಲಿ ಈಗಾಗಲೇ ಚಲಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ವಂಚಕನು ವಿಶೇಷವಾಗಿ ಮೀನು ಮಾರುಕಟ್ಟೆ, ಕಿರಾಣಿ ಅಂಗಡಿ, ಬೇಕರಿ ಹಾಗೂ ಹಾಲಿನ ಅಂಗಡಿಗಳನ್ನು ಗುರಿಯಾಗಿಸಿ ಈ ಕೃತ್ಯ ಎಸಗುತ್ತಿರುವಂತೆ ಕಾಣುತ್ತಿದೆ. ಇಂತಹ ಅಂಗಡಿಗಳಲ್ಲಿ ಯಾವಾಗಲೂ ಗ್ರಾಹಕರ ದಟ್ಟಣೆ ಇರುವುದರಿಂದ ವ್ಯಾಪಾರಿಗಳಿಗೆ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಮಯವಿರುವುದಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡು ವಂಚಕರು ಸುಲಭವಾಗಿ ನಕಲಿ ನೋಟುಗಳನ್ನು ಚಲಾಯಿಸುತ್ತಿದ್ದಾರೆ.
ಭವಿಷ್ಯದಲ್ಲಿ ಗಂಡಾಂತರದ ಆತಂಕ
ಸದ್ಯಕ್ಕೆ ಪತ್ತೆಯಾಗಿರುವುದು ಕೇವಲ 10 ರೂ. ಮುಖಬೆಲೆಯ ನೋಟಾಗಿದ್ದರೂ, ಮಾರುಕಟ್ಟೆಯಲ್ಲಿ 100, 200, ಹಾಗೂ 500 ರೂ. ಮುಖಬೆಲೆಯ ಆಟಿಕೆಯ ನೋಟುಗಳೂ ಲಭ್ಯವಿವೆ. ಮುಂದೊಂದು ದಿನ ವಂಚಕರು 500 ರೂ. ನೋಟುಗಳನ್ನು ಇದೇ ರೀತಿ ಚಲಾವಣೆ ಮಾಡಿದ್ದೇ ಆದಲ್ಲಿ, ಸಣ್ಣ-ಪುಟ್ಟ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿ ಅಂಗಡಿ ಮುಚ್ಚಬೇಕಾದ ಅಪಾಯ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
”ಯಾರೋ ಅಪರಿಚಿತ ವ್ಯಕ್ತಿ ವ್ಯಾಪಾರಕ್ಕೆ ಅಂಗಡಿಗೆ ಬಂದಿದ್ದ. ಬಹಳಷ್ಟು ತಿಂಡಿ ತಿನಿಸುಗಳನ್ನು ಖರೀದಿಸಿದ. ಆದರೆ, ಎಲ್ಲ ನೋಟುಗಳನ್ನು 10 ರೂ. ಮುಖಬೆಲೆಯದ್ದೇ ನೀಡಿದನು. ನನಗೂ ಸಹ ಚಿಲ್ಲರೆ ಸಿಕ್ಕಿತೆಂದು ಖುಷಿಯಾಯಿತು. ಆದರೆ ಚಿಲ್ಲರೆ ನೀಡಿದ ವ್ಯಕ್ತಿಯ ಹಿಂದೆ ಇಂತಹ ದುರುದ್ದೇಶವಿದ್ದುದು ಗೊತ್ತಾಗಲಿಲ್ಲ. ಆ ನಕಲಿ ನೋಟು ಕಂಡು ನಾನು ಕೂಡ ದಿಗ್ಭ್ರಮೆಗೊಂಡಿದ್ದೇನೆ” ಎಂದು ಬೇಕರಿ ಮಾಲೀಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
