Spread the love

ದಾಂಡೇಲಿ: ಕಡಿಮೆ ಬೆಲೆಗೆ ಉತ್ತಮ ಕಾರು ಕೊಡಿಸುವುದಾಗಿ ನಂಬಿಸಿ ಕಾಂಟ್ರಾಕ್ಟರ್ ಒಬ್ಬರಿಂದ ಬರೋಬ್ಬರಿ 5 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದ್ದು, ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದಾಂಡೇಲಿಯ ಲಕ್ಷ್ಮಿ ಚಾಳ ನಿವಾಸಿ, ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿರುವ 27 ವರ್ಷದ ಗೋಪಾಲ್‌ಸಿಂಗ್ ಸುಧೀರ್‌ಸಿಂಗ್ ರಜಪೂತ ಹಣ ಕಳೆದುಕೊಂಡ ಸಂತ್ರಸ್ತ ಫಿರ್ಯಾದಿಯಾಗಿದ್ದಾರೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರ ನಿವಾಸಿ 33 ವರ್ಷದ ಶಿವಕುಮಾರ ಮುರಗೇಶ ಗೌಂಡರ ಎಂಬಾತನೇ ವಂಚನೆಗೈದ ಆರೋಪಿಯಾಗಿದ್ದಾನೆ. 

ಆರೋಪಿ ಶಿವಕುಮಾರ್, ಕಾಂಟ್ರಾಕ್ಟರ್ ಗೋಪಾಲ್‌ಸಿಂಗ್ ಅವರಿಗೆ ಕಡಿಮೆ ದರದಲ್ಲಿ ಉತ್ತಮ ಕಾರು ಕೊಡಿಸುವುದಾಗಿ ನಂಬಿಸಿದ್ದ. ಈತನ ಮಾತು ನಂಬಿದ ಗೋಪಾಲ್‌ಸಿಂಗ್ ಅವರು, ದಿನಾಂಕ 16-07-2025 ರಂದು ದಾಂಡೇಲಿಯ ಕುಳಗಿ ಬ್ರಿಡ್ಜ್ ಬಳಿ ಹಾಗೂ ಇತರೆಡೆಗಳಲ್ಲಿ ಫೋನ್‌ಪೇ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 5,05,000 ರೂಪಾಯಿಗಳನ್ನು ಆರೋಪಿಗೆ ಪಾವತಿಸಿದ್ದರು.

ಹಣ ಪಡೆದ ನಂತರ ಆರೋಪಿ ಶಿವಕುಮಾರ್, ಬೇರಾರಿಗೋ ಸೇರಿದ ಕಪ್ಪು ಬಣ್ಣದ ಕ್ರೆಟಾ (Creta) ಕಾರನ್ನು (ನೋಂದಣಿ ಸಂಖ್ಯೆ: KA 19 MF 4585) ತಂದು ಗೋಪಾಲ್‌ಸಿಂಗ್‌ಗೆ ನೀಡಿದ್ದ. ಅಲ್ಲದೆ, ಇನ್ನು 2 ದಿನಗಳಲ್ಲಿ ಕಾರಿನ ಅಧಿಕೃತ ಕಾಗದಪತ್ರಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ, ಕೆಲ ದಿನಗಳ ಬಳಿಕ ಕಾರಿನ ಅಸಲಿ ಮಾಲೀಕರು ಬಂದು ತಮ್ಮ ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ ಆರೋಪಿ ಶಿವಕುಮಾರ್, ಕಾಂಟ್ರಾಕ್ಟರ್‌ಗೆ ಬೇರೆ ಕಾರನ್ನೂ ಕೊಡದೆ ಹಾಗೂ ಪಡೆದುಕೊಂಡಿದ್ದ 5,05,000 ರೂ. ಹಣವನ್ನೂ ಹಿಂದಿರುಗಿಸದೆ ಉದ್ದೇಶಪೂರ್ವಕವಾಗಿ ವಂಚನೆ ಎಸಗಿದ್ದಾನೆ.

ಹಣ ಕಳೆದುಕೊಂಡು ಮೋಸಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತ ಗೋಪಾಲ್‌ಸಿಂಗ್ ಅವರು ಠಾಣೆ ಮೆಟ್ಟಿಲೇರಿದ್ದಾರೆ. ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 318 (4) ರ ಅಡಿಯಲ್ಲಿ (ಅಪರಾಧ ಕ್ರಮಾಂಕ: 141/2026) ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *