ಕಾರವಾರ: ತಾಲೂಕಿನ ವಿವಿಧೆಡೆ ಅಕ್ರಮವಾಗಿ ನಡೆಯುತ್ತಿದ್ದ ಓ.ಸಿ ಮಟಕಾ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಆಸೆ ಹುಟ್ಟಿಸಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಮಲ್ಲಾಪುರ ಹಾಗೂ ಕದ್ರಾ ಠಾಣೆಯ ಪೊಲೀಸರು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಿಪೇಟೆಯಲ್ಲಿರುವ ಶ್ರೀ ಮಾರುತಿ ದೇವಸ್ಥಾನಕ್ಕೆ ಹೋಗುವ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸುನೀಲ ಬಂಡಿವಡ್ಡರ ನೇತೃತ್ವದ ತಂಡ ಶುಕ್ರವಾರ(ಸೆ.04) ರಂದು ಬೆಳಿಗ್ಗೆ 10-45 ಗಂಟೆಗೆ ದಿಢೀರ್ ದಾಳಿ ನಡೆಸಿದೆ.
ಈ ವೇಳೆ ಸಾರ್ವಜನಿಕರ ಬಳಿ ಹಣ ಪಡೆದು ಮಟಕಾ ಆಡಿಸುತ್ತಿದ್ದ ಮಲ್ಲಾಪುರದ ಗಾಂಧಿನಗರದ ನಿವಾಸಿ ಮಂಜುನಾಥ ಬಸಪ್ಪ ಮದುವಣ್ಣನವರ (39) ಎಂಬಾತನನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆಪಾದಿತನಿಂದ 310 ರೂಪಾಯಿ ನಗದು, ಅಂಕೆ-ಸಂಖ್ಯೆ ಬರೆದ ಚೀಟಿ ಹಾಗೂ ಪೆನ್ ಜಪ್ತಿ ಮಾಡಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದೇ ರೀತಿ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಅಕ್ರಮ ಜೂಜಾಟದ ಮೇಲೆ ಪೊಲೀಸರು ಚಾಟಿ ಬೀಸಿದ್ದಾರೆ. ಕದ್ರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಇರುವ ಬಸ್ ನಿಲ್ದಾಣದ ಒಳಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಆಸೆ ಹುಟ್ಟಿಸಿ ಜನರಿಂದ ಹಣ ಪಡೆಯುತ್ತಿದ್ದ ಆರೋಪಿಯನ್ನು ಪಿಎಸ್‌ಐ ಕೃಷ್ಣಕಾಂತ ಪಾಟೀಲ್ ನೇತೃತ್ವದ ತಂಡ ಶುಕ್ರವಾರ (ಸೆ. 04) ರಂದು ಬೆಳಿಗ್ಗೆ 11-00 ಗಂಟೆಗೆ ದಾಳಿ ನಡೆಸಿ ಬಂಧಿಸಿದೆ.
ಕದ್ರಾ ರಾಜೀವನಗರದ ನಿವಾಸಿ ಆರ್ಮುಗಮ್ ಸುಬ್ಬಯ್ಯ ತೇವರ (48) ಬಂಧಿತ ಆರೋಪಿಯಾಗಿದ್ದು, ಈತನಿಂದ 240 ರೂಪಾಯಿ ನಗದು ಮತ್ತು ಮಟಕಾ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 78 (3) ರ ಅಡಿಯಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
